ನವದೆಹಲಿ: ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಪದಕ ಪಡೆಯುವ ಮೂಲಕ ಸಿಂಧು ಬ್ಯಾಡ್ಮಿಂಟನ್ ಕ್ರೀಡೆಯ ದಂತಕತೆಯಾಗುವ ಹಾದಿಯಲ್ಲಿ ತಮ್ಮ ಬೆಳವಣಿಗೆಯನ್ನು ಮುಂದುವರಿಸಿದರೆ, ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಪಡೆದು ನಾಲ್ಕು ವರ್ಷಗಳ ವೈಫಲ್ಯಕ್ಕೆ ತಿಲಾಂಜಲಿಯಾಡಿ 2021ಅನ್ನು ಅವಿಸ್ಮರಣೀಯವನ್ನಾಗಿರಿಸಿಕೊಂಡರು.
ಇವರಿಬ್ಬರ ಜೊತೆಗೆ ಲಕ್ಷ್ಯಸೇನ್ ಚೊಚ್ಚಲ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದು ತಾವೂ ಭಾರತದ ಭವಿಷ್ಯ ಎಂದು ಬ್ಯಾಡ್ಮಿಂಟನ್ ಜಗತ್ತಿಗೆ ತೋರಿಸಿಕೊಟ್ಟರು. ಆದರೆ ವೈಯಕ್ತಿಕವಾಗಿ ಯಶಸ್ಸು ಸಾಧಿಸಿದಷ್ಟು ಇಡೀ ತಂಡವಾಗಿ ಭಾರತ ತಂಡ ಪ್ರಸಕ್ತ ವರ್ಷದಲ್ಲಿ ವೈಫಲ್ಯ ಅನುಭವಿಸಿದೆ.
ಸಿಂಧು ಬ್ಯಾಕ್ ಟು ಬ್ಯಾಕ್ ಒಲಿಂಪಿಕ್ ಮೆಡಲ್ : ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿಪದಕ ಗೆದ್ದಿದ್ದ ಪಿವಿ ಸಿಂಧು ಟೋಕಿಯೋದಲ್ಲಿ ಒಂದು ವರ್ಷ ಮುಂದೂಡಿ 2021ರಲ್ಲಿ ನಡೆದ ಒಲಿಂಪಿಕ್ ಕೂಟದಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ವರ್ಷದ ಕೊನೆಯಲ್ಲಿ ನಡೆದ ವಿಶ್ವ ಟೂರ್ ಫೈನಲ್ಸ್ನಲ್ಲಿ ಬೆಳ್ಳಿಪದಕ ಪಡೆಯುವ ಮೂಲಕ 2021ಅನ್ನು ಅವಿಸ್ಮರಣೀಯವನ್ನಾಗಿಸಿಕೊಂಡರು.
2019ರ ವಿಶ್ವ ಚಾಂಪಿಯನ್ ಆಗಿರುವ ಸಿಂಧು ಕೋವಿಡ್ ಕಾರಣದಿಂದ ಅರ್ಹತಾ ಟೂರ್ನಿ ರದ್ದಾದರೂ ಒಲಿಂಪಿಕ್ಸ್ಗೆ ಶ್ರೇಯಾಂಕದ ಆಧಾರದ ಮೇಲೆ ನೇರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೊನೆಗೆ ಟೂರ್ನಿಯಲ್ಲಿ ಕಂಚು ಗೆದ್ದು ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಮೊದಲ ಮಹಿಳೆ ಹಾಗೂ ಎರಡನೇ ಭಾರತೀಯ ಕ್ರೀಡಾಪಟು ಎನಿಸಿಕೊಂಡರು.
ಒಲಿಂಪಿಕ್ಸ್ ನಂತರ ಎರಡು ತಿಂಗಳ ಬ್ರೇಕ್ ಪಡೆದುಕೊಂಡ ಸಿಂಧು ನಂತರ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದರು. ಫ್ರೆಂಚ್ ಓಪನ್, ಇಂಡೋನೇಷ್ಯಾ ಮಾಸ್ಟರ್ ಮತ್ತು ಇಂಡೋನೇಷ್ಯಾ ಓಪನ್ನಲ್ಲಿ ಸೆಮಿಫೈನಲ್ ಬ್ಯಾಕ್ ಟು ಬ್ಯಾಕ್ ಸೆಮಿಫೈನಲ್ ಪ್ರವೇಶಿಸಿದರೆ, ವಿಶ್ವ ಟೂರ್ ಫೈನಲ್ಸ್ನಲ್ಲಿ ಬೆಳ್ಳಿ ಪದಕ ಗೆದ್ದರು. ಇದೇ ಹುರುಪಿನಲ್ಲಿ ತಮ್ಮ ವಿಶ್ವ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಕಣಕ್ಕಿಳಿದಿದ್ದ ಅವರು ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರು. ಆದರೆ ಸಂಪೂರ್ಣ ವರ್ಷದಲ್ಲಿ ಸಿಂಧು ಅಭೂತಪೂರ್ವ ಯಶಸ್ಸು ಸಾಧಿಸಿದರೆಂಬುದುವುದರಲ್ಲಿ ಎರಡು ಮಾತಿಲ್ಲ.
ಬಹುದೊಡ್ಡ ಸಾಧನೆಯೊಂದಿಗೆ ಫಾರ್ಮ್ಗೆ ಮರಳಿದ ಶ್ರೀಕಾಂತ್ : 2017ರಲ್ಲಿ ಆಡಿದ 5 ಫೈನಲ್ಸ್ನಲ್ಲಿ 4 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಸತತ 4 ವರ್ಷಗಳ ಕಾಲ ವೈಫಲ್ಯ ಅನುಭವಿಸಿದ್ದರು. ಒಂದು ಕಡೆ ಗಾಯ, ಮತ್ತೊಂದು ಕಡೆ ವೈಫಲ್ಯದ ಜೊತೆಗೆ ಫಿಟ್ನೆಸ್ ಸಮಸ್ಯೆ ಕಾಡಿತ್ತು. ಕೊನೆಗೆ ಶ್ರೀಕಾಂತ್ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿ ವೃತ್ತಿ ಜೀವನದ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದ್ದರು.
ಈ ಎಲ್ಲಾ ನಿರಾಸೆ, ಬೇಸರದಿಂದ ನಿಧಾನವಾಗಿ ಚೇತರಿಸಿಕೊಂಡ 28 ವರ್ಷದ ಗುಂಟೂರು ಶಟ್ಲರ್ ಹೈಲೋ ಓಪನ್ ಮತ್ತು ಇಂಡೋನೇಷ್ಯಾ ಮಾಸ್ಟರ್ಸ್ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದರೆ, ಕಳೆದ ವಾರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಮತ್ತೆ ತಮ್ಮ ನೈಜ ಫಾರ್ಮ್ಗೆ ಮರಳಿದರು. ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಟಾಪ್ 10ಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯುವ ಪ್ರತಿಭೆ ಲಕ್ಷ್ಯ ಸೇನ್ ಉದಯ : ಭಾರತದ ಭರವಸೆಯಾಗಿದ್ದ ಶ್ರೀಕಾಂತ್ ಹತಾಷೆಯಿಂದ ದಿನಗಳನ್ನು ಕಳೆಯುತ್ತಿದ್ದಾಗ ದೇಶದ ಪುರುಷರ ಬ್ಯಾಡ್ಮಿಂಟನ್ ಕಥೆ ಮುಗಿದೇ ಹೋಗಬಹುದು ಎಂಬ ಆಲೋಚನೆಯಲ್ಲಿದ್ದಾಗ ಸದ್ದಿಲ್ಲದೆ ಜೂನಿಯರ್ ವಿಭಾಗದಲ್ಲಿದ್ದ ಪ್ರಕಾಶ್ ಪಡುಕೋಣೆಯ ಶಿಷ್ಯ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ನಲ್ಲಿ ತಮ್ಮದೇ ಆದ ಮೈಲುಗಲ್ಲನ್ನು ಸ್ಥಾಪಿಸುತ್ತಾ ಬಂದರು.
20 ವರ್ಷದ ಯಂಗ್ ಸ್ಟಾರ್ ಡಚ್ ಓಪನ್ನಲ್ಲಿ ಫೈನಲ್ ತಲುಪಿದರೆ, ಹೈಲೋ ಓಪನ್ನಲ್ಲಿ ಸೆಮಿಫೈನಲ್ ಮತ್ತು ತಮ್ಮ ಮೊದಲ ವಿಶ್ವ ಟೂರ್ ಫೈನಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ನಂತರದ ಒಂದು ವಾರದ ಅಂತರದಲ್ಲಿ ನಡೆದ ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿ ಗುರುವಿನ ಜೊತೆಗೆ ಐತಿಹಾಸಿಕ ಸಾಧನೆಯನ್ನು ಹಂಚಿಕೊಂಡರು.
ವರ್ಷ ಪೂರ್ತಿ ಹಿನ್ನಡೆ ಅನುಭವಿಸಿ ಬೋರ್ಡ್ನಿಂದ ಫಂಡ್ ಪಡೆಯಲು ವಿಫಲರಾಗಿದ್ದ ಹೆಚ್ಎಸ್ ಪ್ರಣಯ್ ವರ್ಷದ ಕೊನೆಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕೆಲವು ಸ್ಟಾರ್ ಶಟ್ಲರ್ಗಳಿಗೆ ಸೋಲುಣಿಸಿ ಗಮನ ಸೆಳೆದರು. ಡಬಲ್ಸ್ ವಿಭಾಗದ ಯುವ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಜೋಡಿ ಸರಾಸರಿ ಪ್ರದರ್ಶನ ತೋರಿತು. ಈ ಜೋಡಿ ಒಲಿಂಪಿಕ್ಸ್ನಲ್ಲೂ ಸ್ಪರ್ಧಿಸಿ ತಮಗಿಂತ ಟಾಪ್ ಶ್ರೇಯಾಂಕದ ಜೋಡಿಗೆ ಸೋಲುಣಿಸಿದರೂ ಪೋಡಿಯಂನಲ್ಲಿ ನಿಲ್ಲಲು ವಿಫಲವಾಯಿತು.
ಇನ್ನು ಸೈನಾ ನೆಹ್ವಾಲ್ ಗಾಯದಲ್ಲೆ ಹೆಚ್ಚು ದಿನಗಳನ್ನು ಕಳೆದರೆ ಕೆಲವು ಟೂರ್ನಿಗಳಲ್ಲಿ ಮೊದಲ ಸುತ್ತುಗಳಲ್ಲೇ ಸೋಲು ಕಂಡು ದಯನೀಯ ವೈಫಲ್ಯ ಕಂಡರು. ಕೋವಿಡ್ 19 ಕಾರಣ ಕೆಲವು ಟೂರ್ನಿ ರದ್ಧಾಗಿದ್ದರಿಂದ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿಯೂ ವಿಫಲರಾದರು.
ಇನ್ನು ಸಿಂಗಲ್ಸ್ನಲ್ಲಿ ಭಾರತೀಯ ಶಟ್ಲರ್ಗಳು ಕೆಲವೊಂದು ಅದ್ಭುತ ಗೆಲುವುಗಳ ಮೂಲಕ ಗಮನ ಸೆಳೆದರೆ, ಡಬಲ್ಸ್ ವಿಭಾಗದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸುಗಳಿಸುವಲ್ಲಿ ವಿಫಲರಾದರು.
ಮುಂಬರುವ ಇತರ ಷಟ್ಲರ್‌ಗಳಾದ ಅಮನ್ ಫರೋಗ್ ಸಂಜಯ್, ರೇವತಿ ದೇವಸ್ಥಲೆ, ಪ್ರಿಯಾಂಶು ರಾಜಾವತ್ ಕೂಡ ಕಳೆದ ವರ್ಷದಲ್ಲಿ ಅಂತರರಾಷ್ಟ್ರೀಯ ಗೆಲುವುಗಳನ್ನು ದಾಖಲಿಸುವ ಮೂಲಕ ಭಾರತೀಯ ಬ್ಯಾಡ್ಮಿಂಟನ್‌ಗೆ ಭರವಸೆ ನೀಡಿದರು.