ಅಂದ ಹಾಗೆ ಬಿಗ್ ಬಾಸ್ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದ ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದ ಮೇಲೆ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ವೀಕ್ಷಕರಿಗೆ ಇದ್ದೇ ಇರುತ್ತದೆ. ಈ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಶೈನ್ ಶೆಟ್ಟಿ
ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ಇನ್ನು ಕೂಡಾ ಗೆಲುವಿನ ಸಂಭ್ರಮದಿಂದ ಹೊರಬಂದಿಲ್ಲ. ತಮ್ಮ ಗೆಲುವನ್ನು ಎಂಜಾಯ್ ಮಾಡುತ್ತಿರುವ ಶೈನ್, ಸಂಭ್ರಮದ ನಡುವೆಯೂ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಮಾತ್ರವಲ್ಲ ಸಿನಿಮಾದ ಜೊತೆಗೆ ವೆಬ್ ಸೀರೀಸ್ನಲ್ಲಿ ಕೂಡಾ ನಟಿಸುವ ತಯಾರಿಯಲಿದ್ದಾರೆ. ಇದರೊಂದಿಗೆ ತಮಗೆ ಆಧಾರವಾಗಿದ್ದ ಫುಡ್ ಟ್ರಕ್ಕನ್ನು ಕೂಡಾ ಅಭಿವೃದ್ಧಿಪಡಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ.
ಕುರಿ ಪ್ರತಾಪ್
ಬಿಗ್ ಬಾಸ್ ಸೀಸನ್ 7 ರನ್ನರ್ ಆಪ್ ಕುರಿ ಪ್ರತಾಪ್ ಮೊದಲಿನಂತೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ದೊಡ್ಮನೆಯಿಂದ ಹೊರಬಂದ ತಕ್ಷಣವೇ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಕುರಿ ಪ್ರತಾಪ್, ದೊಡ್ಮನೆಯೊಳಗೆ ಹೋಗುವ ಮುಂಚೆ ಕಮಿಟ್ ಆಗಿದ್ದ ಚಿತ್ರಗಳ ಶೂಟಿಂಗ್ ಮುಗಿಸುತ್ತಿದ್ದಾರೆ.

ಪ್ರಿಯಾಂಕ ಶಿವಣ್ಣ
ಅಗ್ನಿ ಸಾಕ್ಷಿಯ ಚಂದ್ರಿಕಾ ಎಂದೇ ಮನೆ ಮಾತಾಗಿದ್ದ ಪ್ರಿಯಾಂಕ ಶಿವಣ್ಣ ದೊಡ್ಮನೆಯಿಂದ ಬಂದ ಬಳಿಕ ಸೀದಾ ಪರಭಾಷೆಗೆ ಹಾರಿದ್ದಾರೆ.ಅರ್ಥಾತ್ ತೆಲುಗು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ಒತ್ತಡದಲ್ಲಿ ಇರುವ ಪ್ರಿಯಾಂಕ ಶೂಟಿಂಗ್ ನಡುವೆಯೂ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಚಂದನ್ ಆಚಾರ್
ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟನಾ ಕ್ಷೇತಕ್ಕೆ ಬಂದ ಚಂದನ್ ಆಚಾರ್ ವೀಕ್ಷಕರಿಗೆ ಹತ್ತಿರವಾದುದು ಬಿಗ್ ಮನೆಗೆ ಬಂದ ಬಳಿಕವೇ. ಇದೀಗ ಅಲ್ಲಿಂದ ಬಂದ ನಂತರ ಸಿನಿಮಾ ರಂಗದಲ್ಲಿ ಚಂದನ್ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಾಯಕನಾಗಿ ಮಿಂಚುತ್ತಿದ್ದಾರೆ. ಚಂದನ್ ಅಭಿನಯದ 'ಮಂಗಳವಾರ ರಜಾದಿನ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಕಿಶನ್ ಬಿಳಗಲಿ
ರಜೆಯ ಮಜಾವನ್ನು ಸಂತಸದಿಂದ ಎಂಜಾಯ್ ಮಾಡುತ್ತಿರುವ ಕಿಶನ್, ಸದ್ಯ ಯಾವುದೇ ಪ್ರಾಜೆಕ್ಟ್ನತ್ತ ಮುಖ ಮಾಡಿಲ್ಲ. ಬದಲಿಗೆ ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋದಲ್ಲಿ ಕಿಶನ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಒಂದಷ್ಟು ಡ್ಯಾನ್ಸ್ ಕಾರ್ಯಗಾರಗಳಲ್ಲಿ ಭಾಗವಹಿಸುತ್ತಿದ್ದಾರೆ.

ಹರೀಶ್ ರಾಜ್
ಬಿಗ್ ಬಾಸ್ ಸ್ಪರ್ಧಿಯಾಗಿ ಮೋಡಿ ಮಾಡಿದ್ದ ಹಿರಿತೆರೆ ನಟ ಹರೀಶ್ ರಾಜ್ ಸದ್ಯ ಸಿನಿಮಾ ರಂಗದಲ್ಲಿ ಬ್ಯುಸಿ. ಹರೀಶ್ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು ಅದರಲ್ಲಿ ಇವರು ಪೋಲೀಸ್ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೀಪಿಕಾ ದಾಸ್
ನಾಗಿಣಿ ಧಾರಾವಾಹಿಯ ಅಮೃತ ಆಗಿ ಮನೆ ಮಾತಾಗಿದ್ದ ದೀಪಿಕಾ ದೊಡ್ಮನೆಯೊಳಗೆ ಹೋದ ಬಳಿಕ ಮತ್ತಷ್ಟು ಫೇಮಸ್ ಆದರು. ಟಾಸ್ಕ್ಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದ ದೀಪಿಕಾ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಬಗ್ಗೆ ಅಧಿಕೃತ ಮಾಹಿತಿ ಇನ್ನು ತಿಳಿದು ಬಂದಿಲ್ಲ.

ಭೂಮಿ ಶೆಟ್ಟಿ
ಕಿನ್ನರಿ ಧಾರಾವಾಹಿಯ ಭೂಮಿ ಶೆಟ್ಟಿ ಕೂಡಾ ಈ ಸೀಸನ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ದೊಡ್ಮನೆಯಿಂದ ಹೊರ ಬಂದ ಬಳಿಕ ಯಾವುದೇ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳದ ಈಕೆ ಹುಟ್ಟೂರಾದ ಕುಂದಾಪುರದಲ್ಲಿ ಕುಟುಂಬದವರೊಡನೆ ಕಾಲ ಕಳೆಯುತ್ತಿದ್ದಾರೆ.

ವಾಸುಕಿ ವೈಭವ್
ಸಂಗೀತ ನಿರ್ದೇಶಕ ವಾಸುಕಿ ದೊಡ್ಮನೆಯೊಳಗೂ ಕವಿತೆ ರಚಿಸುವ ಮೂಲಕ ಮನೆ ಮಾತಾಗಿದ್ದರು. ಇದೀಗ ಒಂದಷ್ಟು ಪ್ರಾಜೆಕ್ಟ್ಗಳನ್ನು ಇವರು ಒಪ್ಪಿಕೊಂಡಿದ್ದಾರೆ.

ಚಂದನ ಅನಂತಕೃಷ್ಣ
ರಾಜಾ ರಾಣಿಯ ಚುಕ್ಕಿಯಾಗಿ ಕಿರಿತೆರೆಯಲ್ಲಿ ಮಿಂಚಿದ್ದ ಚಂದನ ಸದ್ಯ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಡು ಕರ್ನಾಟಕದ ನಿರೂಪಕಿಯಾಗಿ ಮನ ಸೆಳೆಯುತ್ತಿದ್ದಾರೆ.

ಸುಜಾತ ಅಕ್ಷಯ
ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸ್ಟಾರ್ ಸುವರ್ಣ ವಾಹಿನಿಯ ಕಿಚನ್ ದರ್ಬಾರ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವ ಸುಜಾತಾ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ರುಕ್ಮಿಣಿಯಾಗಿ ಅಭಿನಯಿಸುತ್ತಿದ್ದಾರೆ.
