ಬಿಗ್ಬಾಸ್ ಮನೆಯ ಅತ್ಯಂತ ಕಿರಿಯ ಸದಸ್ಯ ಹಾಗೂ ಗಾಯಕ ವಿಶ್ವನಾಥ್ ಈ ವಾರದ ಕ್ಯಾಪ್ಟನ್ ಆಗಿದ್ದು, ಮುಂದಿನ ವಾರ ನಾಮಿನೇಷನ್ನಿಂದ ಕೂಡ ಹೊರಗುಳಿದಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯೊಳಗೆ ಚದುರಂಗ ಎಂಬ ಗೇಮ್ ಆಡಿಸಲಾಗಿತ್ತು. ಅದರಲ್ಲಿ ಬಿಳಿ ಬಣ್ಣದ ತಂಡದವರು ಗೆಲುವು ಕಂಡಿದ್ದರು. ಹಾಗಾಗಿ, ಆ ತಂಡದ ಒಬ್ಬರಿಗೆ ಕ್ಯಾಪ್ಟನ್ ಆಗುವ ಅವಕಾಶ ಇತ್ತು. ಅದಕ್ಕಾಗಿ ಶಬ್ಧವೇಧಿ ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಅದರ ಪ್ರಕಾರ, ಬಿಗ್ ಬಾಸ್ ಆರು ಪ್ರಾಣಿ - ಪಕ್ಷಿಗಳ ಶಬ್ಧ ಕೇಳಿಸುತ್ತಾರೆ. ಯಾವ ಶಬ್ಧ ಮೊದಲು ಕೇಳಿತು ಎಂದು ಸದಸ್ಯರು ಕ್ರಮವಾಗಿ ಆ ಪ್ರಾಣಿ - ಪಕ್ಷಿಗಳ ಫೋಟೋಗಳನ್ನು ಜೋಡಿಸಬೇಕಿತ್ತು. ಐದು ಬಾರಿ ಈ ಟಾಸ್ಕ್ ಮಾಡಿಸಲಾಯಿತು. ಇದರಲ್ಲಿ ಎರಡು ಬಾರಿ ವಿಶ್ವ ಸರಿಯಾಗಿ ಜೋಡಿಸಿ ಕ್ಯಾಪ್ಟನ್ ಆಗಿ ಆಯ್ಕೆಯಾದರು.
ಇನ್ನು ಕ್ಯಾಪ್ಟನ್ ಆಗುತ್ತಿದ್ದಂತೆ ವಿಶ್ವನಿಗೆ ಅವರ ಅಮ್ಮನಿಂದ ಕರೆ ಬಂದಿದ್ದು, ಚೆನ್ನಾಗಿ ಆಟ ಆಡುತ್ತೀದ್ದೀಯಾ ಇನ್ನೂ ಚೆನ್ನಾಗಿ ಆಡು ಎಂದು ಹುರಿದುಂಬಿಸಿದರು. ಆ ವೇಳೆ ವಿಶ್ವನಾಥ್ ಭಾವುಕರಾದರು. ಇನ್ನು, ವಿಶ್ವ ಕ್ಯಾಪ್ಟನ್ ಆಗಿದ್ದಕ್ಕೆ ಮನೆ ಮಂದಿಯೆಲ್ಲ ಕುಣಿದು ಕುಪ್ಪಳಿಸಿದರು.
ಮಾತುಗಾರ ಮಂಜ:
ಅತಿ ಹೆಚ್ಚು ಮಾತನಾಡುವ ವ್ಯಕ್ತಿ ಹಾಗೂ ಮಾತನಾಡದೇ ಇರುವ ವ್ಯಕ್ತಿಯನ್ನು ಗುರುತಿಸಿ ಪ್ಲ್ಯಾಸ್ಟರ್ ಹಾಗೂ ಮೈಕ್ ಹಾಕುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ ಮನೆಯ ಸದಸ್ಯರು ಕಾಮಿಡಿ ಮೂಲಕ ಗುರುತಿಸಿಕೊಂಡಿದ್ದ ಮಂಜು ತಮ್ಮ ಮಾತಿನಿಂದ ಎಲ್ಲರ ಗಮನ ಸೆಳೆದಿದ್ದು, ಕೆಲವೊಮ್ಮೆ ಇರಿಟೇಟ್ ಆಗುತ್ತದೆ ಎಂಬೆಲ್ಲಾ ಕಾರಣ ನೀಡಿ ಮಂಜುಗೆ ಪ್ಲ್ಯಾಸ್ಟರ್ ಹಾಕಿದರು. ಸದಾ ನಗುತ್ತಲೇ ಇರುವ ವೈಷ್ಣವಿ ಅತಿ ಕಡಿಮೆ ಮಾತನಾಡುವ ವ್ಯಕ್ತಿಯಾಗಿ ಮೈಕ್ ಹಾಕಿಸಿಕೊಂಡರು.
ಇನ್ನು ಮಂಜುಗೆ ಬಿಗ್ಬಾಸ್ ಚಟುವಟಿಕೆಯೊಂದನ್ನು ನೀಡಿದ್ದು, ಮುಂದಿನ ಆದೇಶ ಬರುವವರೆಗೂ ಯಾರೊಂದಿಗೂ ಮಾತನಾಡುವಂತಿಲ್ಲ, ವೈಷ್ಣವಿ ಸಹಾಯದಿಂದ ಮಾತ್ರ ಮಾತನಾಡುವಂತೆ ಸೂಚಿಸಿದ್ದಾರೆ. ಅದರಂತೆ ಮಂಜು ಕೈ ಸನ್ನೆ ಮೂಲಕ ವೈಷ್ಣವಿ ಜೊತೆ ಮಾತನಾಡುತ್ತಿದ್ದು, ಈ ಮೂಲಕ ವೈಷ್ಣವಿ ಧ್ವನಿ ಮನೆಯಲ್ಲಿ ಕೇಳಿ ಬರುತ್ತಿದೆ.