ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿರುವ 'ಇಂತಿ ನಿಮ್ಮ ಆಶಾ' ಧಾರಾವಾಹಿಯಲ್ಲಿ ಮೋನಿಕಾ ಆಗಿ ನಟಿಸುತ್ತಿದ್ದ ಶಾಂತಲಾ ಕಾಮತ್ ಧಾರಾವಾಹಿಯಿಂದ ಹೊರಬಂದಿದ್ದಾರೆ. ಇದೀಗ ಶಾಂತಲಾ ಜಾಗಕ್ಕೆ ನಟಿ ಸ್ವಪ್ನ ಬಂದಿದ್ದಾರೆ.
ಶಾಂತಲಾ ಈ ಧಾರಾವಾಹಿಯಲ್ಲಿ ಮೋನಿಕಾ ಆಗಿ ನಟಿಸುತ್ತಿದ್ದರು. ಕಾರಣಾಂತರಗಳಿಂದ ಅವರು ಈ ಧಾರಾವಾಹಿಯಿಂದ ಅರ್ಧದಲ್ಲೇ ಹೊರನಡೆದಿದ್ದಾರೆ. ನಾಯಕ ಸಮರ್ಥ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿರುವ ಮೋನಿಕಾಳ ಸ್ಟೈಲ್, ಮಾತಿನ ಮೋಡಿಗೆ ಸಮರ್ಥ್ ಫಿದಾ ಆಗಿದ್ದು ಅವಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಿದ್ದಾನೆ. ಇದೀಗ ಮೋನಿಕಾ ಆಗಿ ಸ್ವಪ್ನ ದೀಕ್ಷಿತ್ ನಟಿಸಲಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಮಲಿ' ಯಲ್ಲಿ ನಾಯಕ ರಿಷಿಯ ಅಮ್ಮನಾಗಿ ಕಾಣಿಸಿಕೊಂಡಿರುವ ಸ್ವಪ್ನ ಅವರು ಇದೀಗ ಮೋನಿಕಾ ಪಾತ್ರಕ್ಕೂ ಜೀವ ತುಂಬಲು ತಯಾರಾಗಿದ್ದಾರೆ.
ಉದಯ ಟಿವಿಯಲ್ಲಿ ನಿರೂಪಕಿಯಾಗಿ ನಟನಾ ಪಯಣ ಆರಂಭಿಸಿದ ಸ್ವಪ್ನ 'ಪ್ರಾಯಶ್ಚಿತ್ತ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ ಪಾ.ಪ ಪಾಂಡು, ಸಿಲ್ಲಿಲಲ್ಲಿ, ಪಾಯಿಂಟ್ ಪರಿಮಳ, ಪಾಂಡುರಂಗ ವಿಠಲ, ದಂಡ ಪಿಂಡಗಳು, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ, ಮಾಂಗಲ್ಯ, ಪುರುಷೋತ್ತಮ, ಪದ್ಮಾವತಿ ಹೀಗೆ ಸುಮಾರು 75 ಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. ರನ್ನ, ರಂಗಿತರಂಗ, ಕೃಷ್ಣ ರುಕ್ಕು, ಪ್ರೀತಿಯ ಲೋಕ, ಶಿವಲಿಂಗ, ಭರ್ಜರಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಕೂಡಾ ನಟಿಸಿರುವ ಸ್ವಪ್ನ ಬೆಳ್ಳಿತೆರೆಯಲ್ಲೂ ತಮ್ಮ ನಟನಾ ಛಾಪನ್ನು ಮೂಡಿಸಿದ್ದಾರೆ. ಸ್ವಪ್ನ ಅವರ ಮೂಲಕ ಹೆಸರು ನಳಿನಿ. ' ಏಕ್ ದುಜೇ ಕೇಲಿಯೇ' ಸಿನಿಮಾ ನೋಡಿದ ನಂತರ ಸ್ವಪ್ನ ತಂದೆ-ತಾಯಿ ಆಕೆ ಹೆಸರನ್ನು ಬದಲಾಯಿಸಿದರು.