ಕಿರುತೆರೆ ನಟ-ನಟಿಯರು ಇತ್ತೀಚೆಗೆ ಬೆಳ್ಳಿತೆರೆಯಲ್ಲೂ ಉತ್ತಮ ಅವಕಾಶ ಪಡೆಯುತ್ತಿದ್ದಾರೆ. 'ಜೊತೆ ಜೊತೆಯಲಿ' ಖ್ಯಾತಿಯ ಮೇಘ ಶೆಟ್ಟಿ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಹೋಗಲು ರೆಡಿಯಾಗುತ್ತಿದ್ದರೆ, ಮತ್ತೊಂದೆಡೆ 'ಸೀತಾ ವಲ್ಲಭ' ಖ್ಯಾತಿಯ ಮೈಥಿಲಿ ಅಲಿಯಾಸ್ ಸುಪ್ರಿತಾ ಸತ್ಯನಾರಾಯಣ ಮತ್ತೊಬ್ಬ ಹೀರೋ ಜೊತೆ 'ಲಾಂಗ್ ಡ್ರೈವ್' ಹೋಗುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ನಾಯಕಿ ಸುಪ್ರಿತಾ ತಮ್ಮ ಮೊದಲ ಧಾರಾವಾಹಿಯಲ್ಲೇ ಸೀರಿಯಲ್ ಪ್ರಿಯರ ಮನ ಸೆಳೆದಿದ್ದರು. ಸುಪ್ರಿತಾ ಇದೀಗ ಬೆಳ್ಳಿತೆರೆಗೆ ಹಾರಿದ್ದಾರೆ. ಶ್ರೀರಾಜ್ ನಿರ್ದೇಶನದ 'ಲಾಂಗ್ ಡ್ರೈವ್' ಸಿನಿಮಾಗೆ ಸುಪ್ರಿತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೀತಾವಲ್ಲಭ ಧಾರಾವಾಹಿ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಸುಪ್ರಿತಾ ಇದೀಗ ಬೆಳ್ಳಿತೆರೆಯಲ್ಲೂ ಬ್ಯುಸಿ. 'ರಹದಾರಿ' ಸಿನಿಮಾದಲ್ಲಿ ದರೋಡೆಕೋರರ ಗ್ಯಾಂಗ್ ಲೀಡರ್ ಆಗಿ ಕಾಣಿಸಿಕೊಂಡಿರುವ ಈಕೆ, ಇದೇ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಲಿದ್ದಾರೆ. ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿರುವ 'ಸರಸು' ಧಾರಾವಾಹಿಯಲ್ಲಿ ಕೂಡಾ ಸುಪ್ರಿತಾ ನಾಯಕಿ ಸರಸು ಪಾತ್ರದಲ್ಲಿ ನಟಿಸುತ್ತಿದ್ದಾರೆ.
"ಬಯಸದೆ ಬಣ್ಣದ ಲೋಕಕ್ಕೆ ಬಂದಿರುವ ನಾನು ಇಂದು ಸೀರಿಯಲ್ ಮಾತ್ರವಲ್ಲದೆ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲ ಧಾರಾವಾಹಿಯಲ್ಲೇ ನಾಯಕಿ ಪಾತ್ರ ದೊರೆತದ್ದು ನನ್ನ ಅದೃಷ್ಟ. ನಾನಿಂದು ಎಲ್ಲಿಗೆ ಹೋದರೂ ಜನರು ಮೈಥಿಲಿ ಎಂದೇ ಗುರುತಿಸುತ್ತಾರೆ. ಇದೀಗ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಜೊತೆಗೆ ಹೊಸ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಯಲ್ಲೂ ಬರುತ್ತಿದ್ದೇನೆ. ಒಟ್ಟಾರೆಯಾಗಿ ಒಳ್ಳೆ ಅವಕಾಶಗಳು ಅರಸಿ ಬರುತ್ತಿರುವುದು ಬಹಳ ಖುಷಿಯಾಗುತ್ತಿದೆ ಎನ್ನುತ್ತಾರೆ ಸುಪ್ರಿತಾ.