ಕಿರುತೆರೆ ನಟಿ ಸುಜಾತ ಅಕ್ಷಯ ಬಹುತೇಕ ಎಲ್ಲರಿಗೂ ಗೊತ್ತು. ನಿರೂಪಕಿಯಾಗಿ ಕರಿಯರ್ ಆರಂಭಿಸಿ ಕಿರುತೆರೆಯಲ್ಲಿ ಮಿಂಚಿದ್ದ ಸುಜಾತ ಅಕ್ಷಯ ಕಳೆದ ವರ್ಷ ಮುಕ್ತಾಯವಾದ 'ರಾಧಾರಮಣ' ಧಾರಾವಾಹಿಯಲ್ಲಿ ರಮಣನ ಅತ್ತೆ, ವಿಲನ್ ಸಿತಾರಾ ದೇವಿ ಆಗಿ ಗಮನ ಸೆಳೆದಿದ್ದರು.
'ರಾಧಾರಮಣ' ಧಾರಾವಾಹಿ ನಂತರ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಸುಜಾತ ನಂತರ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಲಾಕ್ ಡೌನ್ ನಂತರ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿ ಪ್ರಸಾರ ನಿಲ್ಲಿಸಿದ್ದು ಸುಜಾತ ಬಣ್ಣದ ಲೋಕದಿಂದ ದೂರವಿದ್ದರು. ಇದೀಗ ಮತ್ತೆ ಆ್ಯಕ್ಟಿಂಗ್ ಆರಂಭಿಸಿರುವ ಶುರು ಮಾಡಿರುವ ಸುಜಾತ, ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಸರಸು' ಧಾರಾವಾಹಿಯಲ್ಲಿ ಸುಜಾತ ನಟಿಸಲಿದ್ದಾರೆ. ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ 'ಹೂಮಳೆ' ಧಾರಾವಾಹಿಯಲ್ಲಿ ನಾಯಕಿಯ ಅಮ್ಮನಾಗಿ ಸುಜಾತ ಕಾಣಿಸಿಕೊಳ್ಳಲಿದ್ದಾರೆ.
'ನಾಕುತಂತಿ'ಯ ಮೇಘ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಸುಜಾತ ನಂತರ ಮನೆಯೊಂದು ಮೂರು ಬಾಗಿಲು, ಭೃಂಗದ ಬೆನ್ನೇರಿ, ಬದುಕು, ಎಲ್ಲಾ ಮರೆತಿರುವಾಗ, ಸ್ವಾಭಿಮಾನ, ರಾಧಾ, ಸೃಷ್ಟಿ, ಅರಮನೆ, ಪ್ರೀತಿ ಎಂದರೇನು, ಮುಗಿಲು, ರಾಧಾ ರಮಣ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ರಾಧಾ ರಮಣ ಧಾರಾವಾಹಿಯ ಸಿತಾರಾ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ಕೊಟ್ಟಿತ್ತು. ನಟನೆಯ ಜೊತೆಗೆ ನಿರೂಪಕಿಯಾಗಿ ಮೋಡಿ ಮಾಡಿದ್ದ ಸುಜಾತಾಗೆ ಹೆಸರು ತಂದುಕೊಟ್ಟದ್ದು ಗೋಲ್ಡನ್ ಸ್ಟಾರ್ ಜೊತೆಗೆ ನಡೆಸಿಕೊಡುತ್ತಿದ್ದ ಕಾಮಿಡಿ ಟೈಮ್ ಕಾರ್ಯಕ್ರಮ. ನಂತರ ಪಾಕಶಾಲೆ ಕಾರ್ಯಕ್ರಮದ ನಿರೂಪಕಿಯಾಗಿಯೂ ಗುರುತಿಸಿದ್ದ ಈಕೆ ಸ್ಟಾರ್ ಸುವರ್ಣ ವಾಹಿನಿಯ ಕಿಚನ್ ದರ್ಬಾರ್ ಕಾರ್ಯಕ್ರಮದ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.