ಸಿನಿಮಾ ಕಲಾವಿದರು ಕಿರುತೆರೆಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದರಲ್ಲೂ ಧಾರಾವಾಹಿಗಳ ಅತಿಥಿ ಪಾತ್ರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಸುಧಾರಾಣಿ ಸರದಿ. ಚಂದನವನದ ಚೆಂದದ ನಟಿ ಸುಧಾರಾಣಿ ಕೂಡಾ ಇದೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ಲಾಯರ್ ಶಕುಂತಲಾ ದೇವಿಯಾಗಿ ಸುಧಾರಾಣಿ ಕಾಣಿಸಿಕೊಳ್ಳುತ್ತಿದ್ದಾರೆ.
'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಮಧು ಹಾಗೂ ನಾಯಕ ಮದನ್ ಮನಸಾರೆ ಪ್ರೀತಿಸುತ್ತಿರುತ್ತಾರೆ. ಮೊದಲು ಇವರ ಪ್ರೀತಿಗೆ ಎರಡು ಕುಟುಂಬದ ವಿರೋಧವಿದ್ದರೂ ಇವರ ಪ್ರೀತಿ ಕಂಡು ಮದುವೆಗೆ ಒಪ್ಪಿಗೆ ನೀಡುತ್ತಾರೆ. ಆದರೆ ಮದುವೆ ನಿಶ್ಚಯವಾದ ದಿನ ಮದನ್ ಆಕ್ಸಿಡೆಂಟ್ನಲ್ಲಿ ಸಾಯುತ್ತಾನೆ. ನಂತರ ಮಧು ಮದುವೆ ಮದನ್ ತಮ್ಮ ವಿಶಾಲ್ ಜೊತೆ ನಡೆಯುತ್ತದೆ. ತನ್ನ ಪ್ರಿಯಕರನ ಸಾವಿಗೆ ವಿಶಾಲ್ ಕಾರಣ ಎಂದು ಭಾವಿಸಿರುವ ಮಧು ಮನೆಯವರ ಒತ್ತಾಯಕ್ಕೆ ವಿಶಾಲ್ನನ್ನು ಮದುವೆಯಾದರೂ ಆತನನ್ನು ದ್ವೇಷಿಸುತ್ತಿರುತ್ತಾಳೆ.
ಇತ್ತ ವಿಶಾಲ್ನನ್ನು ಪ್ರೀತಿಸುತ್ತಿದ್ದ ಅಂಜಲಿಗೆ ವಿಶಾಲ್ ಮದುವೆಯಾಗಿರುವುದು ತಿಳಿಯುತ್ತದೆ. ಅಂಜಲಿ ಮಧುವಿನ ಜೊತೆ ಮಾತನಾಡಿ ಮದನ್ ಡೈವೋರ್ಸ್ ನೀಡುವಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪಿರುವ ಮಧು ಡೈವೋರ್ಸ್ ಕೇಳಲು ಲಾಯರ್ ಶಕುಂತಲಾ ದೇವಿ ಬಳಿ ಬರುತ್ತಾರೆ. ನಂತರ ಏನು ನಡೆಯುತ್ತದೆ ಎಂಬುದೇ ಈ ಧಾರಾವಾಹಿ ಕಥೆ. ಇಷ್ಟು ದಿನ ಬೆಳ್ಳಿತೆರೆಯಲ್ಲಿ ವೀಕ್ಷಕರನ್ನು ರಂಜಿಸಿದ್ದ ಸುಧಾರಾಣಿ ಈಗ ಲಾಯರ್ ಶಕುಂತಲಾ ದೇವಿ ಆಗಿ ಕಿರುತೆರೆ ವೀಕ್ಷಕರನ್ನು ಹೇಗೆ ಸೆಳೆಯುತ್ತಾರೆ ಕಾದು ನೋಡಬೇಕು.