ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುಬ್ಬಲಕ್ಷ್ಮಿ ಸಂಸಾರ' ಮಹಿಳೆಯರ ಅಚ್ಚುಮೆಚ್ಚಿನ ಧಾರವಾಹಿ. ಇದೀಗ ಈ ಧಾರವಾಹಿ ಯಶಸ್ವಿ 500 ಎಪಿಸೋಡ್ಗಳನ್ನು ಪೂರೈಸಿದೆ.
2017 ಜೂನ್ 12 ರಂದು ಆರಂಭವಾಗಿದ್ದ ಈ ಧಾರವಾಹಿ ಇದುವರೆಗೂ ತನ್ನದೇ ಆದ ಪ್ರೇಕ್ಷಕರನ್ನು ಹೊಂದಿದೆ. ಧಾರವಾಹಿ ಸೆಟ್ನಲ್ಲಿ ಕಲಾವಿದರು ಕೇಕ್ ಕತ್ತರಿಸುವ ಮೂಲಕ ತಮ್ಮ ಸಂತಸ ಹಂಚಿಕೊಂಡರು. ಇದು ಪತಿ-ಪತ್ನಿ ನಡುವಿನ ಹೊಂದಾಣಿಕೆಯಿಲ್ಲದ ಕಥೆಯನ್ನು ಹೊಂದಿರುವ ಧಾರವಾಹಿ. ನಟಿ, ಕಂಠದಾನ ಕಲಾವಿದೆ ದೀಪು ಹಾಗೂ ಭವಾನಿ ಸಿಂಗ್ ಈ ಧಾರವಾಹಿಯಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿದ್ದಾರೆ. ಸುಬ್ಬಲಕ್ಷ್ಮಿ ಎಂಬ ಗ್ರಾಮೀಣ ಪ್ರದೇಶದ ಹೆಣ್ಣುಮಗಳು ಗುರುಮೂರ್ತಿ ಎಂಬ ಬ್ಯುಸಿನೆಸ್ ಮ್ಯಾನ್ಅನ್ನು ಮದುವೆಯಾಗಿರುತ್ತಾಳೆ. ಅವರಿಬ್ಬರಿಗೂ ಒಬ್ಬ ಮಗನಿರುತ್ತಾನೆ. ಆದರೆ ಗುರುಮೂರ್ತಿಗೆ ಸುಬ್ಬಲಕ್ಷ್ಮಿ ಮೇಲೆ ಸ್ವಲ್ಪವೂ ಪ್ರೀತಿಯಿರುವುದಿಲ್ಲ.
ಗುರುಮೂರ್ತಿ ತನ್ನ ಕಚೇರಿಯ ಸೆಕ್ರೆಟರಿ ಶನಯಾ ಎಂಬ ಯುವತಿ ಮೇಲೆ ಆಕರ್ಷಿತನಾಗುತ್ತಾನೆ. ಆದರೆ ಇದನ್ನು ತಿಳಿದ ಸುಬ್ಬಲಕ್ಷ್ಮಿ ಗುರುಮೂರ್ತಿಯನ್ನು ಶನಯಾ ಪ್ರೀತಿಯಿಂದ ಹೊರತಂದು ತನ್ನ ಸಂಸಾರವನ್ನು ಉಳಿಸಿಕೊಳ್ಳಲು ನಾನಾ ಉಪಾಯಗಳನ್ನು ಮಾಡುತ್ತಲೇ ಇರುತ್ತಾಳೆ. ಇಷ್ಟಾದರೂ ಗುರುಮೂರ್ತಿ ಮಾತ್ರ ಸುಬ್ಬಲಕ್ಷ್ಮಿ ಜೊತೆ ಹೊಂದಿಕೊಳ್ಳಲು ಸಿದ್ಧನಿರುವುದಿಲ್ಲ. ಸುಬ್ಬಲಕ್ಷ್ಮಿ ಇನ್ನು ಮುಂದಾದರೂ ತನ್ನ ಪತಿಯನ್ನು ವಾಪಸ್ ಪಡೆದು ಸುಖ ಸಂಸಾರ ನಡೆಸುತ್ತಾಳಾ ಎಂಬುದನ್ನು ಕಾದುನೋಡಬೇಕು.