ಇತ್ತೀಚೆಗೆ ದೊಡ್ಡ ನಟ-ನಟಿಯರೆಲ್ಲಾ ವೆಬ್ ಸೀರೀಸ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸಿನಿಮಾಗಳಿಂದ ದೂರವಿದ್ದ ಕೆಲವು ಕಲಾವಿದರು ಕೂಡಾ ಇದೀಗ ಕಿರುತೆರೆ ಹಾಗೂ ವೆಬ್ ಸರಣಿಗಳ ಮೂಲಕ ಮತ್ತೆ ಆ್ಯಕ್ಟಿಂಗ್ಗೆ ವಾಪಸಾಗುತ್ತಿದ್ದಾರೆ. ಅದರಲ್ಲಿ ಸ್ನೇಹ ಉಲ್ಲಾಳ್ ಕೂಡಾ ಒಬ್ಬರು.
ಕರ್ನಾಟಕದಲ್ಲಿ ಜನಿಸಿ ಬಾಲಿವುಡ್, ಟಾಲಿವುಡ್ನಲ್ಲಿ ಹೆಸರು ಮಾಡಿದ, ಕನ್ನಡದ ಐಶ್ವರ್ಯ ರೈ ಎಂದೇ ಹೆಸರಾದ ಸ್ನೇಹ ಉಲ್ಲಾಳ್ ಕೂಡಾ ಇದೀಗ ಮತ್ತೆ ನಟನೆಗೆ ವಾಪಸಾಗಿದ್ದಾರೆ. ಮಂಗಳೂರಿನ ಸ್ನೇಹ ಉಲ್ಲಾಳ್ಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ತೆಲುಗಿನ 'ಉಲ್ಲಾಸಂಗ ಉತ್ಸಾಹಂಗ' ಚಿತ್ರ. ಇದೇ ಚಿತ್ರ ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ' ಹೆಸರಿನಲ್ಲಿ 2009 ರಲ್ಲಿ ತಯಾರಾಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಸ್ನೇಹ ಉಲ್ಲಾಳ್ ಅವರನ್ನು ಕರೆ ತರಲು ಚಿತ್ರತಂಡ ನಿರ್ಧರಿಸಿದ್ದರೂ ಅವರ ಡೇಟ್ಸ್ ಸಿಗದ ಕಾರಣ ಆ ಜಾಗಕ್ಕೆ ಯಾಮಿ ಗೌತಮ್ ಬಂದು ಹೋದರು.

ಆದರೆ ನಂತರ ಕನ್ನಡದ 'ದೇವಿ' ಚಿತ್ರಕ್ಕೆ ಸ್ನೇಹ ಉಲ್ಲಾಳ್ ನಾಯಕಿಯಾಗಿ ಬಂದರು. ಚಿತ್ರದಲ್ಲಿ ಮಧು ಬಂಗಾರಪ್ಪ ನಾಯಕನಾಗಿ ನಟಿಸಿದ್ದರು. ಆದರೆ ಈ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಒಲಿದು ಬರಲೇ ಇಲ್ಲ. ಈಗ ದಕ್ಷಿಣ ಕನ್ನಡದ ಈ ಚೆಲುವೆ 'ಎಕ್ಸ್ಪೈರಿ ಡೇಟ್' ಎಂಬ ವೆಬ್ ಸೀರೀಸ್ನಲ್ಲಿ ನಟಿಸಿದ್ದಾರೆ. ಈ ಸೀರೀಸ್ ಅಕ್ಟೋಬರ್ 2 ರಿಂದ ಜೀ 5 ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಸ್ನೇಹ ಉಲ್ಲಾಳ್ ಜೊತೆ ಟೋನಿ ಲ್ಯೂಕ್, ಮಧು ಶಾಲಿನಿ, ಅಲಿ ರೇಜಾ ಕೂಡಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
'ಎಕ್ಸ್ಪೈರಿ ಡೇಟ್' ಥ್ರಿಲ್ಲರ್ ಕಥಾವಸ್ತು ಇರುವ ಸೀರೀಸ್. ಜೋಡಿಗಳ ನಡುವೆ ಸುತ್ತುವ ಕಥೆ ಇದು. ಜೀವನದಲ್ಲಿ ಮೋಸಕ್ಕೆ ಒಳಗಾದಾಗ ಅಸಹನೆ, ಅಹಂ ಬಂದಾಗ ಏನಾಗುತ್ತದೆ ಎಂಬುದನ್ನು ಈ ಸೀರೀಸ್ನಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಸ್ನೇಹ ಪಾತ್ರ ಬಹಳ ಪ್ರಮುಖವಾಗಿದೆಯಂತೆ. ಶಂಕರ್ ಕೆ. ಮಾರ್ತಾಂಡ ಈ ವೆಬ್ ಸೀರೀಸ್ ನಿರ್ದೇಶಕರು. ನಾರ್ತ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಈ ವೆಬ್ ಸೀರೀಸ್ ನಿರ್ಮಾಣ ಮಾಡಿದೆ. ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ಪ್ರಸಾರ ಆಗಲಿದೆ.