ಬಣ್ಣದ ಲೋಕದಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿರುವ ಈ ನಟಿ ಬಹುತೇಕ ಎಲ್ಲರಿಗೂ ಗೊತ್ತು. ಇವರ ಹೆಸರು ವಾಣಿಶ್ರೀ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾವಲ್ಲಭ ಧಾರಾವಾಹಿಯಲ್ಲಿ ನಾಯಕನ ಅತ್ತೆ ದೇವಕಿ ಆಗಿ ನಟಿಸುತ್ತಿದ್ದಾರೆ.

ವಾಣಿಶ್ರೀ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕನಾಗಿ ಅಮ್ಮ ಭವಾನಿ ಪಾತ್ರಕ್ಕೆ ಕೂಡಾ ಜೀವ ತುಂಬುತ್ತಿದ್ದಾರೆ. ಹಿರಿತೆರೆ ಮೂಲಕ ನಟನಾ ಕ್ಷೇತ್ರಕ್ಕೆ ಬಂದ ವಾಣಿಶ್ರೀ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅಭಿನಯದ ಭರ್ಜರಿ ಗಂಡು ಸಿನಿಮಾದಲ್ಲಿ ತಂಗಿಯಾಗಿ ನಟಿಸಿದ ವಾಣಿಶ್ರೀ ನಂತರ ಕಲಿಯುಗ, ಅಲ್ಲಿ ರಾಮಚಾರಿ ಇಲ್ಲಿ ಬ್ರಹ್ಮಚಾರಿ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಅಭಿನಯಿಸಿದರು. ಒಂದಷ್ಟು ಸಿನಿಮಾಗಳಲ್ಲಿ ತಂಗಿಯ ಪಾತ್ರದ ಮೂಲಕ ಗಮನ ಸೆಳೆದ ವಾಣಿಶ್ರೀ ಸಿಂಧು ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಜಿ.ವಿ.ಅಯ್ಯರ್ ಅವರ ಕೃಷ್ಣಲೀಲ ಮತ್ತು ಶಾಂತಲಾ ಸಿನಿಮಾದಲ್ಲಿ ನಟಿಸಿದ್ದ ಈಕೆ ಮೈ ಸನ್ ಎನ್ನುವ ಇಂಗ್ಲೀಷ್ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಮನೋಜ್ಞವಾದ ಅಭಿನಯದ ಮೂಲಕ ಹಿರಿತೆರೆಯಲ್ಲಿ ಕಮಾಲ್ ಮಾಡಿದ ವಾಣಿಶ್ರೀ, ಸುನೀಲ್ ಪುರಾಣಿಕ್ ನಿರ್ದೇಶನದ ಸ್ವರ ಸಂಪದ ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದರು. ಇಲ್ಲಿಯ ತನಕ ಬರೋಬ್ಬರಿ ಮುನ್ನೂರು ಧಾರಾವಾಹಿಗಳಲ್ಲಿ ನಟಿಸಿರುವ ವಾಣಿಶ್ರೀ ತಮಿಳಿನ ನಂದಿನಿ, ತೆಲುಗಿನ ಕಥ ಕಾನಿ ಕಥ, ಹಿಂದಿಯ ಕಾಲ್ ಅತೀಶ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ಕಿರುತೆರೆ, ಹಿರಿತೆರೆ ಜೊತೆಗೆ ಜಾಹೀರಾತು ಕ್ಷೇತ್ರದಲ್ಲಿಯೂ ಛಾಪು ಮೂಡಿಸಿರುವ ವಾಣಿಶ್ರೀ ಈಗಾಗಲೇ ಎಂಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಗಮನ ಸೆಳೆದಿದ್ದಾರೆ. ಬಿಎಸ್ಸಿ ಕಲಿತು ಫ್ಯಾಷನ್ ಡಿಸೈನಿಂಗ್ ಮುಗಿಸಿರುವ ವಾಣಿಶ್ರೀ ಯಾವುದೇ ತಯಾರಿ ಮಾಡಿಕೊಳ್ಳದೆ ನಟನಾ ಲೋಕಕ್ಕೆ ಕಾಲಿಟ್ಟರು. ಇಂದಿಗೂ ಕೂಡಾ ಅವರು ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ.
