ಮಾಡೆಲಿಂಗ್ ಕ್ಷೇತ್ರದಿಂದ ಕನ್ನಡ ಕಿರುತೆರೆಗೆ ಅನೇಕ ಪ್ರತಿಭೆಗಳು ಬಂದಿದ್ದಾರೆ. ಧಾರಾವಾಹಿಗಳಲ್ಲಿ ಮಿಂಚುತ್ತಿರುವ ರಕ್ಷಾ ಹೊಳ್ಳ ಕೂಡಾ ಕಿರುತೆರೆಗೆ ಬರುವ ಮುನ್ನ ಮಾಡೆಲ್ ಆಗಿ ಫ್ಯಾಷನ್ ಶೋನಲ್ಲಿ ಕ್ಯಾಟ್ ವ್ಯಾಕ್ ಮಾಡಿದ್ದಾರೆ. ಧಾರಾವಾಹಿ ಎಂಬುದು ನನ್ನ ಆಲ್ ಟೈಮ್ ಫೇವರೆಟ್ ಎನ್ನುತ್ತಾರೆ ರಕ್ಷಾ ಹೊಳ್ಳ.
ಪದವಿ ಮುಗಿದದ್ದೇ ತಡ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರಕ್ಷಾ ಹೊಳ್ಳ, ಸುಮಾರು ನೂರಕ್ಕೂ ಅಧಿಕ ವೇದಿಕೆಗಳಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ. ನಂತರ ಕಿರುತೆರೆಯತ್ತ ಮುಖ ಮಾಡಿರುವ ಅವರು, ಬಿ. ಮಧುಸೂದನ್ ಅವರ 'ಪಲ್ಲವಿ ಅನುಪಲ್ಲವಿ' ಆಡಿಷನ್ಗೆ ಭಾಗವಹಿಸಿ ಆಯ್ಕೆಯಾದರು. ಮೊದಲ ಧಾರಾವಾಹಿಯಲ್ಲೇ ಹಠಮಾರಿ ಹುಡುಗಿಯ ಪಾತ್ರ ಮಾಡಿದ್ದ ರಕ್ಷಾ, ನಂತರ ಕೋಗಿಲೆ ಧಾರಾವಾಹಿಯಲ್ಲಿ ಅಭಿನಯಿಸಿದರು. ಮಿಲನಾ ಧಾರಾವಾಹಿಯ ಐಶ್ವರ್ಯ ಆಗಿ ನಟಿಸಿದ ಈಕೆಗೆ ಆ ಪಾತ್ರ ಜನಪ್ರಿಯತೆ ತಂದುಕೊಟ್ಟಿತು. ಮಾತ್ರವಲ್ಲ ಉತ್ತಮ ಅಭಿನಯ ಪ್ರಶಸ್ತಿಯನ್ನು ಕೂಡಾ ತಮ್ಮ ಮುಡಿಗೇರಿಸಿಕೊಂಡರು.
ಹರಹರ ಮಹಾದೇವ ಪೌರಾಣಿಕ ಧಾರಾವಾಹಿಯಲ್ಲಿ ಮಧುರೈ ಮೀನಾಕ್ಷಿಯಾಗಿ ಬಣ್ಣ ಹಚ್ಚಿದ ರಕ್ಷಾ, ಕಡಿಮೆ ಅವಧಿಯಲ್ಲಿ ಜನರ ಮನ ಸೆಳೆದರು. ಅದೇ ಕಾರಣದಿಂದ ಪಾತ್ರ ಸಣ್ಣದಾಗಿದ್ದರೂ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು ರಕ್ಷಾ. ಮಿಲನ ಧಾರಾವಾಹಿ ನಂತರ ಕನ್ನಡ ಧಾರಾವಾಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ರಕ್ಷಾ, ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾದರು. ತೆಲುಗಿನ 'ಪುಟ್ಟಿಂಟಿ ಪಟ್ಟುಚೀರ' ಧಾರಾವಾಹಿಯಲ್ಲಿ ಗೋದಾವರಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಕ್ಷಾ ಅಲ್ಲಿಂದ ತಮಿಳು ಕಿರುತೆರೆಗೂ ಹೋದರು.
ತಮಿಳಿನ 'ಕಡವುಳ್ ಮುರುಘನ್' ಧಾರಾವಾಹಿಯಲ್ಲಿ ರಕ್ಷಾ ಅಜಮುಖಿಯಾಗಿ ಗಮನ ಸೆಳೆದರು. ಅದು ನೆಗೆಟಿವ್ ಪಾತ್ರ. ರಾಕ್ಷಸಿಯಾಗಿ ತಮಿಳು ಕಿರುತೆರೆಯಲ್ಲಿ ಕಾಣಿಸಿಕೊಂಡ ರಕ್ಷಾ ಅಲ್ಲೂ ಯಶಸ್ವಿಯಾದರು. ಮತ್ತೊಂದು ತಮಿಳು ಧಾರಾವಾಹಿ, 'ನಾಮ್ ಇರುವರ್ ನಮಕ್ ಇರುವರ್' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ರಕ್ಷಾ ನಟಿಸಿದ್ದಾರೆ. ಅಷ್ಟರಲ್ಲಿ ಆಕೆಗೆ ಮತ್ತೆ ಕನ್ನಡ ಕಿರುತೆರೆಯಿಂದ ಆಫರ್ ಬಂದಿತು. ಅದನ್ನು ಒಲ್ಲೆ ಎನ್ನದ ಚೆಲುವೆ ಇತ್ತ ಬಂದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಯಸದೆ ಬಳಿ ಬಂದೆ' ಧಾರಾವಾಹಿಯಲ್ಲಿ ನಾಯಕಿ ಕಾವ್ಯಾ ಆಗಿ ಅಭಿನಯಿಸಿದ್ದ ರಕ್ಷಾಗೆ ಸೀರಿಯಲ್ ಆಗಲಿ, ಸಿನಿಮಾ ಆಗಲಿ ಯಾವಾಗಲೂ ಅಭಿನಯಿಸುತ್ತಲೇ ಇರಬೇಕು ಎಂಬ ಆಸೆಯಂತೆ.