ದೂರದ ಊರಿನಿಂದ ಬಂದು ಬೆಂಗಳೂರಲ್ಲಿ ಸಂಪಾದಿಸಿ ಈಗ ಕೊರೊನಾ ಕಾರಣದಿಂದ ಬೆಂಗಳೂರನ್ನು ಬೈಯ್ಯುತ್ತಾ ಹೋಗುತ್ತಿರುವುದು ಇಲ್ಲೇ ಹುಟ್ಟಿ ಬೆಳೆದವರಿಗೆ ನೋವು ತಂದಿದೆ. ಈ ಬಗ್ಗೆ ಕಿರುತೆರೆ ನಟ-ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಅಪ್ಪಟ ಬೆಂಗಳೂರಿನವಳಾದ ನನಗೆ ಬೆಂಗಳೂರು ಬಿಟ್ಟು ಇನ್ನೆಲ್ಲೂ ವಾಸಿಸುವ ಯೋಚನೆ ಇಲ್ಲ. ನಾನು ಈ ಸಿಟಿಯಲ್ಲಿ ಸಂತೋಷವಾಗಿದ್ದೇನೆ' ಎಂದು ಪಾಪ ಪಾಂಡು ಧಾರಾವಾಹಿ ಖ್ಯಾತಿಯ ಪಾಚು ಅಲಿಯಾಸ್ ಶಾಲಿನಿ ಹೇಳುತ್ತಾರೆ.
'ಕೊರೊನಾ ಬೆಂಗಳೂರು ಮಾತ್ರವಲ್ಲ ವಿಶ್ವಾದ್ಯಂತ ಎಲ್ಲರನ್ನೂ ಕಾಡುತ್ತಿದೆ. ನಾಳೆ ಏನಾಗಬಹುದು ಎಂದು ಯಾರಿಗೂ ತಿಳಿದಿಲ್ಲ. ಈಗಾಗಲೇ ಎಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇಂತ ಸಮಯದಲ್ಲಿ ಎಲ್ಲಾ ಸರಿ ಹೋಗುವವರೆಗೂ ಅನುಸರಿಸಿಕೊಂಡು ಹೋಗುವುದು ಬಹಳ ಮುಖ್ಯ' ಎನ್ನುತ್ತಾರೆ ಮಜಾ ಟಾಕೀಸ್ ರಾಣಿ ಶ್ವೇತಾ ಚಂಗಪ್ಪ.
'ಕನಸಿನ ನಗರಿ ಬೆಂಗಳೂರಿಗೆ ನಾನಾ ಕನಸು ಕಟ್ಟಿಕೊಂಡು ಅನೇಕರು ಬರುತ್ತಾರೆ. ಇಲ್ಲಿ ಹೊಟ್ಟೆಪಾಡಿಗಾಗಿ ಸಂಪಾದನೆ ಆರಂಭಿಸುತ್ತಾರೆ. ಆದರೆ ಕೊರೊನಾ ಕಾರಣದಿಂದ ಊರು ಬಿಟ್ಟು ಹೋಗುವುದು ನನಗೆ ಇಷ್ಟವಿಲ್ಲ. ನಾವೆಲ್ಲರೂ ಒಂದಾಗಿ ಬದುಕಬೇಕು. ಏನೇ ಬಂದರೂ ಒಟ್ಟಾಗಿ ಎದುರಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಒಳ್ಳೆಯ ಆಹಾರ ಸೇವಿಸಬೇಕು, ಈ ಸ್ಥಿತಿಗೆ ಹೊಂದಿಕೊಳ್ಳಬೇಕು' ಎನ್ನುತ್ತಾರೆ ಇಷ್ಟದೇವತೆಯ ರಾಮ್ ಪಾತ್ರಧಾರಿ ನಟ ಶ್ರೀ ಮಹಾದೇವ್.
'ನಾನು ಬೆಂಗಳೂರಿನಲ್ಲಿ ಆಡಿ, ಬೆಳೆದ ಹುಡುಗಿ. ಆದರೆ ನನ್ನ ಪತಿಗೆ ಫಿಲಿಡೆಲ್ಫಿಯಾದಲ್ಲಿ ಕೆಲಸ ದೊರೆತಿರುವುದರಿಂದ ಅಲ್ಲಿಗೆ ತೆರೆಳುತ್ತಿದ್ದೇನೆ. ಅಲ್ಲೇ ನಾನು ಫಿಲ್ಮ್ ಮೇಕಿಂಗ್ ಕೋರ್ಸ್ ತೆಗೆದುಕೊಳ್ಳುತ್ತೇನೆ. ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವುದು ನನ್ನ ಗುರಿ. ನಾನು ಎಲ್ಲಿ ಹೋದರೂ ಬೆಂಗಳೂರನ್ನು ಬಹಳ ಇಷ್ಟಪಡುತ್ತೇನೆ' ಎನ್ನುತ್ತಾರೆ ನಟಿ ನಯನ ಪುಟ್ಟಸ್ವಾಮಿ.
'ಬೆಂಗಳೂರು ಎಂದರೆ ನನಗೆ ಬಹಳ ಇಷ್ಟ. ಕೊರೊನಾ ಕಾರಣದಿಂದ ಜನರು ಈ ಮಹಾನಗರ ಬಿಟ್ಟು ಹೋಗುತ್ತಿರುವುದು ನನಗೆ ಸರಿ ಎನಿಸುತ್ತಿಲ್ಲ. ನೀವು ಎಲ್ಲೇ ಇದ್ದರೂ ಸನ್ನಿವೇಶವನ್ನು ನಿಭಾಯಿಸುವುದು ಉತ್ತಮ. ಒಂದು ವೇಳೆ ನಿಮಗೂ ಕೊರೊನಾ ಸೋಂಕು ಇದ್ದು ನಿಮ್ಮ ಊರಿಗೆ ಹೋದರೆ ನೀವೇ ನಿಮ್ಮ ಊರಿನವರಿಗೆ ಕೊರೊನಾ ಹಬ್ಬಿಸಿದಂತೆ ಆಗುತ್ತದೆ' ಎನ್ನುತ್ತಾರೆ ಪೃಥ್ವಿ ಅಂಬರ್.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದ, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ಈ ಕಿರುತೆರೆ ಪ್ರತಿಭೆಗಳು ಬೆಂಗಳೂರನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ.