ಸಿನಿಮಾ ಮತ್ತು ಕಿರುತೆರೆ ಕಲಾವಿದರಿಗೆ ವಿನಾಯಿತಿ ನೀಡಿ, ಶೂಟಿಂಗ್ ನಡೆಸಲು ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಅದರಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಚಿತ್ರೀಕರಣ ಶುರು ಮಾಡಲಾಗಿದೆ. ಇದೆಲ್ಲದರ ನಡುವೆ ಇದೀಗ ಕಿರುತೆರೆ ನಟಿಯೊಬ್ಬರಿಗೆ ಕರೊನಾ ಪಾಸಿಟಿವ್ ಇರುವುದು ಕನ್ಫರ್ಮ್ ಆಗಿದೆ.
ಕರ್ನಾಟಕ ಮೂಲದ ತೆಲುಗಿನ ಕಿರುತೆರೆಯ ಖ್ಯಾತ ನಟಿಗೆ ಕರೊನಾ ಪಾಟಿಸಿವ್ ಇರುವುದು ಧೃಡಪಟ್ಟಿದೆ. ಕನ್ನಡದ ಲಕುಮಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು. ಆದರೆ, ತೆಲುಗು ಧಾರಾವಾಹಿಯಲ್ಲಿ ಹೆಚ್ಚು ಫೇಮಸ್ ಆಗಿದ್ದರು. ಸದ್ಯ 'ನಾ ಪೇರು ಮೀನಾಕ್ಷಿ' ಧಾರಾವಾಹಿ ಶೂಟಿಂಗ್ ವೇಳೆ ಬೇರೊಬ್ಬರಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ಹೋಮ್ ಕ್ವಾರಂಟೈನ್ನಲ್ಲಿದ್ದಾರೆ.
ಮೂಲತಃ ಕರ್ನಾಟಕದವರಾಗಿದ್ದು, ಈ ಹಿಂದೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಟಿವಿ ಕಾರ್ಯಕ್ರಮಗಳನ್ನು ನಿರೂಪಿಸುವುದು ಹಾಗೂ ನಟನೆಯಲ್ಲೂ ತೊಡಗಿಸಿಕೊಂಡಿದ್ದರು. ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಈ ನಟಿ, ವಾಣಿ-ರಾಣಿ, ಆರ್ಣಮನೈ ಕಿಲೈ, ರನ್ ಆಯಂಡ್ ಆಮೆ ಕಥಾ ಧಾರಾವಾಹಿಗಳಲ್ಲಿ ತೊಡಗಿಸಿಕೊಂಡಿದ್ದರು. ಗುಣಲಕ್ಷಣಗಳೇನು ಕಂಡು ಬರದಿದ್ದ ಕಾರಣ, ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಟಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಹಲವು ಕಲಾವಿದರು, ಐಸೋಲೇಷನ್ಗೆ ಹೋಗಲು ನಿರ್ಧರಿಸಿದ್ದಾರೆ. ತೆಲುಗು ಕಿರುತೆರೆಯ ನಿರ್ಮಾಪಕ ಸಂಘದ ಖಜಾಂಚಿಯಾಗಿರುವ ಕೆ. ರಮೇಶ್ ಬಾಬು, ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಎಲ್ಲಾ ಧಾರಾವಾಹಿ ತಂಡಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದರು.