ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇದೆ. ರಾಜ್ಯದಲ್ಲಿ ಏಪ್ರಿಲ್ 18 ಹಾಗೂ 23ರಂದು ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದೆ.
ಇನ್ನು ರಾಜ್ಯ ಚುನಾವಣಾ ಆಯೋಗ ಈ ಬಾರಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿಸಲು ಪಣ ತೊಟ್ಟಿದೆ. ಇದಕ್ಕಾಗಿ ಹಲವು ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಸಂಬಂಧ ಚಿತ್ರನಟಿ ಪ್ರಣೀತಾ ಹಾಗೂ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಪ್ರಚಾರದ ರಾಯಭಾರಿಗಳನ್ನಾಗಿ ನೇಮಿಸಿಕೊಂಡಿದೆ. ಇದರೊಂದಿಗೆ ಕಿರುತೆರೆ ನಟ-ನಟಿಯರು ಹಾಗೂ ಧಾರಾವಾಹಿ ತಂಡವನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದೆ.
ಮೊನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಘೋಷಣೆ ಕೂಗುವ ಮೂಲಕ ಜನರಿಗೆ ಮತದಾನದ ಬಗ್ಗೆ ತಿಳಿಹೇಳಿತ್ತು. ಇದೀಗ ಕಿರುತೆರೆ ನಟರ ಸರದಿ. ನಿರೂಪಕ ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಡ್ಯಾನ್ಸ್ ಶೋ ಕವಿತಾ ಗೌಡ, ನೇಹಾ ಗೌಡ, ಪಾಪ ಪಾಂಡು ಹಾಗೂ ಮಗಳು ಜಾನಕಿ ಧಾರಾವಾಹಿಯ ಎಲ್ಲಾ ಪಾತ್ರಧಾರಿಗಳು 'ಮತದಾನ ನಮ್ಮೆಲ್ಲರ ಹಕ್ಕು, ಅಂದು ಮತ ಚಲಾಯಿಸುವುದಷ್ಟೇ ನಮ್ಮ ಕರ್ತವ್ಯ, ಎಲ್ಲಿಗೂ ಹೋಗದೆ ಮತ ಹಾಕೋಣ' ಎಂದು ಘೋಷಣೆ ಕೂಗುವ ಮೂಲಕ ಅರಿವು ಮೂಡಿಸಿದ್ದಾರೆ.