'ರಾಧಾರಮಣ' ಧಾರಾವಾಹಿಯಲ್ಲಿ ನಾಯಕ ರಮಣನಾಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಹ್ಯಾಂಡ್ಸಮ್ ಹುಡುಗ ಸ್ಕಂದ ಅಶೋಕ್ ಅವರ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ. ಅದಕ್ಕೆ ಕಾರಣ ಸ್ಕಂದ ಅಶೋಕ್ ಮನೆಗೆ ಮುದ್ದುಲಕ್ಷ್ಮಿ ಬಂದಿದ್ದಾಳೆ.
ಸ್ಕಂದ ಅಶೋಕ್ ಪತ್ನಿ ಶಿಖಾ ಪ್ರಸಾದ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮುದ್ದು ಮಗುವಿನ ಆಗಮನದಿಂದ ಮನೆಯವರು ಬಹಳ ಖುಷಿಯಾಗಿದ್ದಾರೆ. ಮುದ್ದು ಕಂದನ ಆರೈಕೆಯಲ್ಲಿ ಬ್ಯುಸಿಯಾಗಿರುವ ಶಿಖಾ ಪ್ರಸಾದ್, ತಮ್ಮ ಮನೆಗೆ ಪುಟ್ಟ ಲಕ್ಷ್ಮಿ ಬಂದಿರುವ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ. ಚೆಂದದ ಹಳದಿ ಬಣ್ಣದ ಫ್ರಾಕ್ ಫೋಟೋವನ್ನು ಹಾಕಿರುವ ಶಿಖಾ ಪ್ರಸಾದ್, "ಪುಟ್ಟುಲಕ್ಷ್ಮಿಯೇ ಈ ಪ್ರಪಂಚಕ್ಕೆ ನಿನಗೆ ಸ್ವಾಗತ" ಎಂದು ಬರೆದುಕೊಂಡಿದ್ದಾರೆ.
ಸ್ಕಂದ ಅವರು ತಮ್ಮ ಮುದ್ದಿನ ಮಡದಿ ಶಿಖಾ ಅವರ ಸೀಮಂತ ಕಾರ್ಯವನ್ನು ಇತ್ತೀಚೆಗೆ ಸಾಂಪ್ರದಾಯಿಕವಾಗಿ, ಸರಳವಾಗಿ ನಡೆಸಿದ್ದರು. ಇದೀಗ ಮಗುವಿನ ಆಗಮನದಿಂದಾಗಿ ಈ ಜೋಡಿಯ ಸಂತೋಷ ಇಮ್ಮಡಿಯಾಗಿದೆ. ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ ಗುರುಹಿರಿಯರ ಒಪ್ಪಿಗೆ ಪಡೆದು 2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿದ್ದರು.