ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಬ್ರದರ್ ಇನ್ ಲಾ ಎಂಬ ಡೈಲಾಗ್ ಹೇಳುವ ಮಾನ್ಸಿ ಈ ಧಾರಾವಾಹಿ ವೀಕ್ಷಕರಿಗೆ ಬಹಳ ಇಷ್ಟ. ವಿಭಿನ್ನ ಶೈಲಿಯ ಡೈಲಾಗ್ನೊಂದಿಗೆ ಪ್ರತಿದಿನವೂ ಹೊಸ ಸ್ಟೈಲ್ ಮೂಲಕ ಹೆಣ್ಣು ಮಕ್ಕಳ ಮನಸೂರೆಗೊಂಡಿರುವ ಮಾನ್ಸಿ ನಿಜವಾದ ಹೆಸರು ಶಿಲ್ಪ ಅಯ್ಯರ್.

ಬಾಲ್ಯದಿಂದಲೂ ಕರ್ನಾಟಕ ಸಂಗೀತದತ್ತ ವಿಶೇಷ ಒಲವು ಹೊಂದಿರುವ ಶಿಲ್ಪ ಅಯ್ಯರ್ಗೆ ಗಾಯಕಿಯಾಗಬೇಕೆಂಬ ಬಯಕೆ. ವಿದ್ವಾನ್ ಮಾರುತಿ ಪ್ರಸಾದ್ ಅವರ ಸಂಗೀತ ಗರಡಿಯಲ್ಲಿ ಪಳಗಿದ ಈಕೆ ಆಗಿದ್ದು ಮಾತ್ರ ನಟಿ. ಪದವಿ ಮುಗಿಸಿ 'ಪ್ರಜಾ ಟಾಕೀಸ್' ಎಂಬ ಕಾರ್ಯಕ್ರಮವನ್ನು ನಿರೂಪಣೆ ಆರಂಭಿಸಿದ ಶಿಲ್ಪ, ನಂತರ ವಾರ್ತಾ ವಾಚಕಿಯಾಗಿ ಕರಿಯರ್ ಆರಂಭಿಸಿದರು. ಕೆಲವು ದಿನಗಳ ನಂತರ ಆಕಸ್ಮಿಕವಾಗಿ ನಟನಾ ಜಗತ್ತಿಗೆ ಕಾಲಿಟ್ಟರು. ಈಗ ಶಿಲ್ಪ ಅಯ್ಯರ್, 'ಜೊತೆ ಜೊತೆಯಲಿ' ಮಾನ್ಸಿ ಆಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಕಾರ್ಯಕ್ರಮದಲ್ಲಿ ಕಿರಿ ಸೊಸೆ ನಾಗವೇಣಿಯಾಗಿ ಕೂಡಾ ಈಕೆ ನಟಿಸುತ್ತಿದ್ದರು.

ಏಕಕಾಲಕ್ಕೆ ಎರಡು ವಿಭಿನ್ನ ಶೇಡ್ ಪಾತ್ರದಲ್ಲಿ ನಟಿಸುತ್ತಿದ್ದ ಮಾನ್ಸಿ, ಕಾರಣಾಂತರಗಳಿಂದ ಕಸ್ತೂರಿ ನಿವಾಸದ ನಾಗವೇಣಿ ಪಾತ್ರದಿಂದ ಹೊರಬಂದಿದ್ದಾರೆ. 'ಶಾಂತಂ ಪಾಪಂ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಶಿಲ್ಪ ಅಯ್ಯರ್ ನಂತರ ಬ್ರಹ್ಮಗಂಟು, ನಾಗಮಂಡಲ, ಮಹಾದೇವಿ ಧಾರಾವಾಹಿಗಳಲ್ಲಿ ಕೂಡಾ ಅಭಿನಯಿಸಿದ್ದಾರೆ. ಇದೀಗ 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಶಿಲ್ಪ, 'ಮೈಲಾಪುರ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಕೈರುಚಿ ಕಾರ್ಯಕ್ರಮದ ನಿರೂಪಕರಾಗಿಯೂ ಸುದ್ದಿ ಮಾಡಿರುವ ಶಿಲ್ಪ ಅವರಿಗೆ ಒಳ್ಳೆಯ ಕಲಾವಿದೆಯಾಗಿ ಗುರುತಿಸಿಕೊಳ್ಳುವ ಆಸೆ.
