ಕಮಲಿ ಧಾರಾವಾಹಿಯಲ್ಲಿ ವಿಲನ್ ಅನಿಕಾ ಮಹಾಜನ್ ಆಗಿ ನಟಿಸುತ್ತಿರುವ ರಚನಾ ಸ್ಮಿತ್ ಇದೀಗ ಬೆಳ್ಳಿತೆರೆಗೆ ಮರಳಿದ್ದಾರೆ. ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದ ರಚನಾ ಸ್ಮಿತ್ಗೆ ಜನಪ್ರಿಯತೆ ದೊರಕಿದ್ದು ಅನಿಕಾ ಆಗಿ ಬದಲಾದ ಬಳಿಕವೇ. ಕಮಲಿಯ ಅನಿಕಾ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅನಿಕಾ ಇದೀಗ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುರುಗ ಅಲಿಯಾಸ್ ಮುನಿಕೃಷ್ಣ ನಟಿಸಿರುವ 'ಮುರುಗ ಕಾನೂನು' ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ ರಚನಾ. ಅಂದ ಹಾಗೆ 'ಮುರುಗ ಕಾನೂನು' ಕಾಮಿಡಿ ಕಥಾ ಹಂದರವನ್ನು ಒಳಗೊಂಡಿದ್ದು, ಇದರಲ್ಲಿ ಡಾಕ್ಟರ್ ಆಗಿ ರಚನಾ ಅಭಿನಯಿಸಲಿದ್ದಾರೆ. ವರದನಾಯಕ, ವಿಕ್ಟರಿ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ರಚನಾ ಇದೀಗ ಮತ್ತೊಮ್ಮೆ ಡಾಕ್ಟರ್ ಅಗಿ ಮನರಂಜನೆ ನೀಡಲಿದ್ದಾರೆ.

ಮುರುಗ ಕಾನೂನು ಚಿತ್ರದ ಪೋಸ್ಟರ್ ಅನ್ನು ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. "ನಾನು ಪವರ್ ಸ್ಟಾರ್ ಪುನೀತ್ ಅವರ ಅಭಿಮಾನಿ. ಮುರುಗ ಕಾನೂನು ಸಿನಿಮಾದ ಪೋಸ್ಟರ್ ಅನ್ನು ಪುನೀತ್ ಅವರೇ ಬಿಡುಗಡೆ ಮಾಡಿದ್ದರು. ತುಂಬಾ ಖುಷಿ ಆಗಿದೆ. ಸದ್ಯಕ್ಕೆ ಇದು ಒಂದೇ ಪ್ರಾಜೆಕ್ಟ್ ನಾನು ಒಪ್ಪಿಕೊಂಡಿದ್ದೇನೆ. ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಕಾರಣ ಬೇರೆ ಪ್ರಾಜೆಕ್ಟ್ ಗಳತ್ತ ಗಮನ ಹರಿಸಿಲ್ಲ." ಎಂದಿದ್ದಾರೆ ರಚನಾ.
