ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರಾವಾಹಿಯಲ್ಲಿ ನಾಯಕಿ ತುಳಸಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಪ್ರಿಯಾಂಕಾ ಕುಮಾರ್. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದ ಪ್ರಿಯಾಂಕಾ, ಇದೀಗ ಹಿರಿತೆರೆಯಲ್ಲೂ ನಟನಾ ಛಾಪನ್ನು ಪಸರಿಸಲು ತಯಾರಾಗಿದ್ದಾರೆ.
ನಟ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮಾನರ್ಸ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಪ್ರಿಯಾಂಕಾ ಕುಮಾರ್ ಬೆಳ್ಳಿಪರದೆಗೆ ಕಾಲಿಡುತ್ತಿದ್ದಾರೆ. ಅಂದ ಹಾಗೇ ಪ್ರಿಯಾಂಕಾ ಎಂದಿಗೂ ನಟನೆಯ ಬಗ್ಗೆ ಕನಸು ಕಂಡವರಲ್ಲ. ಓದುವುದರ ಹೊರತಾಗಿ ಇವರು ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಕಾಲೇಜು ದಿನಗಳಲ್ಲಿ ಮಾಡೆಲಿಂಗ್ನತ್ತ ವಿಶೇಷ ಒಲವು ಹೊಂದಿದ್ದ ಪ್ರಿಯಾಂಕಾ ಅದರತ್ತ ಆಕರ್ಷಣೆಗೆ ಒಳಗಾದರು. ಎಲಿಡ್ ಮಾಡೆಲ್ ಲುಕ್ನಲ್ಲಿ ಗುರುತಿಸಿಕೊಂಡು ಮುಂದೆ ಹತ್ತು ಹಲವು ಶೋಗಳನ್ನು ನೀಡಿದ್ದಾರೆ. ಮುಂಬೈಯಿಂದ ಯುರೋಪ್ಗೆ ತೆರಳುವ ಅವಕಾಶ ಪಡೆದುಕೊಂಡ ಪ್ರಿಯಾಂಕಾ ಭಾರತದಿಂದ ಪ್ರತಿನಿಧಿಸುವ ಇಬ್ಬರು ಸ್ಪರ್ಧಿಗಳಲ್ಲಿ ಇವರೂ ಒಬ್ಬರಾದರು. ಭಾರತವನ್ನು ಪ್ರತಿನಿಧಿಸಿದ ಈ ಚೆಂದುಳ್ಳಿ ಚೆಲುವೆ ಟಾಪ್ 30 ರೊಳಗೆ ಗುರುತಿಸಿಕೊಂಡರು.
ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡ ಪ್ರಿಯಾಂಕಾಗೆ ನಟನಾ ಲೋಕದಿಂದ ಆಫರ್ ದೊರೆಯಿತು. ಆಕಸ್ಮಿಕವಾಗಿ ದೊರೆತ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟ ಪ್ರಿಯಾಂಕಾ ಕುಮಾರ್ ತುಳಸಿಯಾಗಿ ಮನೆ ಮಾತಾದರು. ಬಳಿಕ ಚಾಕಲೇಟ್ ಎನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲಿಯೂ ನಟನಾ ಕಂಪು ಪಸರಿಸಿದ ಈಕೆ, ಕಿರುತೆರೆಯ ನಂತರ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.