ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲೊಂದಾದ ಲಕ್ಷ್ಮಿ ಬಾರಮ್ಮ ಅಭಿಮಾನಿಗಳಿಗೆ ಸಂತಸದ ವಿಚಾರವೊಂದಿದೆ. ಅದೇನಂತೀರಾ? ಪ್ರೀತಿಯ ಶ್ವೇತಾ ಚಿಕ್ಕಿ ಅಮ್ಮನಾಗುತ್ತಿದ್ದು, ಸೀಮಂತ ಕಾರ್ಯ ಅದ್ಧೂರಿಯಾಗಿ ನಡೆದಿದೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಶ್ವೇತಾ ಚಿಕ್ಕಿ ಎಂದೇ ಪರಿಚಿತವಾಗಿರುವ ನವ್ಯಾ ಗೌಡ ಅವರು ಕಾಲೇಜಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೇನೋ ಭಾಗವಹಿಸುತ್ತಿದ್ದರು ನಿಜ, ಆದರೆ ಅವರಿಗೆ ಬಣ್ಣದ ಲೋಕಕ್ಕೆ ಕಾಲಿಡಬೇಕು ಎಂಬ ಯಾವುದೇ ಆಲೋಚನೆಗಳಿರಲಿಲ್ಲವಂತೆ.
ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಂಡ ನವ್ಯಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಅಮ್ಮ ನಿನಗಾಗಿ ಧಾರಾವಾಹಿಯಲ್ಲಿ. ಮೊದಲ ಧಾರಾವಾಹಿಯಲ್ಲೇ ಅಂಜಲಿ ಅನ್ನುವ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈಕೆ ಮುಂದೆ ಈ ಬಂಧನ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು.
ಮುಂದೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಶ್ವೇತಾ ಚಿಕ್ಕಿ ಪಾತ್ರಕ್ಕೆ ಜೀವ ತುಂಬಿದ ನವ್ಯಾ ಇಂದಿಗೂ ಶ್ವೇತಾ ಚಿಕ್ಕಿ ಎಂದೇ ಜನಪ್ರಿಯ. ಅಷ್ಟರ ಮಟ್ಟಿಗೆ ಅವರ ಪಾತ್ರ ಮೋಡಿ ಮಾಡಿಬಿಟ್ಟಿದೆ. ಇದರ ಜೊತೆಗೆ ಹಾರರ್ ಧಾರಾವಾಹಿ ಆತ್ಮಬಂಧನದಲ್ಲೂ ಸೈಕಿಯಾಟ್ರಿಸ್ಟ್ ವೇದಾ ಪಾತ್ರಧಾರಿಯಾಗಿಯೂ ನವ್ಯಾ ಅಭಿನಯಿಸಿದ್ದ ನವ್ಯಾ ಹಿರಿತೆರೆಗೂ ಕಾಲಿಟ್ಟಾಗಿದೆ. ಗಾಂಚಾಲಿ ಅನ್ನುವ ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ನಟಿಸಿದ ಈಕೆ ಮುಂದೆ ಗಜಪಡೆ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.
ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನವ್ಯಾ ಗೌಡ ಮುರಳಿ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇದೀಗ ಮೊದಲ ಕಂದನ ನಿರೀಕ್ಷೆಯಲ್ಲಿರುವ ನವ್ಯಾ ತಾಯ್ತನವನ್ನು ಅನುಭವಿಸಲು ತಯಾರಾಗಿದ್ದಾರೆ.