ಬೆಂಗಳೂರು: ಕಿರುತೆರೆ ಮತ್ತು ಹಿರಿತೆರೆಯಲ್ಲಿ ಪೋಷಕ ಪಾತ್ರ ಮಾಡುವ ಮೂಲಕ ಸುದ್ದಿಯಲ್ಲಿರುವ ನಟ ಶ್ರೀನಾಥ್ ವಸಿಷ್ಠ ಇದೀಗ ಮಹತ್ಕಾರ್ಯ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಶ್ರೀನಾಥ್ ವಸಿಷ್ಠ ಅವರು ತಾವು ವಾಸ ಮಾಡುತ್ತಿರುವ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಂದಹಾಗೆ ಶ್ರೀನಾಥ್ ವಸಿಷ್ಠ ಅವರು ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸಿದ್ದು, ಯಾಕೆ ಎಂಬುದನ್ನು ಕೂಡ ಅವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ನಾನು ವಾಸ ಮಾಡುತ್ತಿರುವ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಆಗಿದೆ. ಅದೇ ಕಾರಣದಿಂದ ಅವರ ಜೊತೆಗಿದ್ದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ನ ಕಮಿಟಿಯವರು 10 ದಿನಗಳ ಕಾಲ ರಕ್ಷಕ್ (ಸೆಕ್ಯೂರಿಟಿ) ಕೆಲಸವನ್ನು ಇಲ್ಲಿನ ನಿವಾಸಿಗಳೇ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ನಾನು ಮಧ್ಯಾಹ್ನ 2ರಿಂದ 10 ಗಂಟೆವರೆಗೆ ನನ್ನ ಶಿಫ್ಟ್‌ನ ಕೆಲಸವನ್ನು ಮಾಡಿದ್ದೇನೆ. ಅದೇ ಕಾರಣದಿಂದ ಗೇಟ್‌ನ ಬಳಿ ಕುಳಿತುಕೊಂಡಿದ್ದೇನೆ. ಅಂದಹಾಗೆ ನಿನ್ನೆ ರಾತ್ರಿ ಶಿಫ್ಟ್ ಅನ್ನು ನನ್ನ ಮಗ ಋತ್ವಿಕ್ ವಸಿಷ್ಠ ಮಾಡಿದ್ದಾನೆ. ಈ ರೀತಿಯ ಸಮಾಜ ಸೇವೆ ಮಾಡಿದ್ದಕ್ಕಾಗಿ ಖುಷಿ ಎನಿಸುತ್ತಿದೆ. 'ಸರ್ವೇಜನ ಸುಖಿನೋ ಭವಂತು' ಎಂದು ಶ್ರೀನಾಥ್ ವಸಿಷ್ಠ ಬರೆದುಕೊಂಡಿದ್ದಾರೆ.
ಶ್ರೀನಾಥ್ ಅವರ ಈ ಪೋಸ್ಟ್ಗೆ ಹಲವಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೀವು ಕೂಡಾ ಕೊರೊನಾ ವಾರಿಯರ್ ಎಂದು ಪ್ರಶಂಸಿಸಿದ್ದಾರೆ.