ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ಶನಾಯ ಆಗಿ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆ ಸಮೀಕ್ಷಾ ಇನ್ನು ಮುಂದೆ ಶ್ರಾವಣಿ ಆಗಿ ನಿಮ್ಮ ಮುಂದೆ ಬರಲಿದ್ದಾರೆ. ಅವರ ಪಾತ್ರದ ಹೆಸರು ಬದಲಾಯಿತೇ ಎಂದು ಕನ್ಫ್ಯೂಸ್ ಆಗಬೇಡಿ. ಬದಲಿಗೆ ಅವರು ಹೊಚ್ಚ ಹೊಸ ಧಾರಾವಾಹಿಯಲ್ಲಿ ಹೊಸ ರೂಪದಲ್ಲಿ ಬರುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುಂದಿನ ಸೋಮವಾರದಿಂದ ಆರಂಭವಾಗಲಿರುವ ಮೂರು ಗಂಟು ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿ ಆಗಿ ಸಮೀಕ್ಷಾ ನಟಿಸಲಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರದಲ್ಲಿ ಮಾಡರ್ನ್ ಡ್ರೆಸ್ ತೊಟ್ಟು ಮಿರ ಮಿರ ಮಿಂಚುತ್ತಿದ್ದ ಶನಾಯ ಇದೀಗ ಲಂಗ ದಾವಣಿ ಧರಿಸಿ ಹಳ್ಳಿ ಹುಡುಗಿ ಶ್ರಾವಣಿ ಆಗಿ ಬದಲಾಗಿದ್ದಾರೆ. ಸೂಪರ್ ಸ್ಟಾರ್ ಅಭಿಮಾನಿ ಶ್ರಾವಣಿ ಪಾತ್ರಕ್ಕೆ ಜೀವ ತುಂಬುತ್ತಿರುವ ಸಮೀಕ್ಷಾ ಅವರ ಹೊಸ ಅವತಾರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಇಲ್ಲಿಯ ತನಕ ಮಾಡರ್ನ್ ಲುಕ್ ನೋಡಿ ಫಿದಾ ಆಗಿದ್ದ ಕಿರುತೆರೆ ಪ್ರಿಯರು, ಸಮೀಕ್ಷಾ ಅವರ ಹೊಸ ಲುಕ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಉದಯ ವಾಹಿನಿಯ ಮೀನಾಕ್ಷಿ ಮದುವೆ ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿದ ಸಮೀಕ್ಷಾಗೆ ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಅದಮ್ಯ ಆಸೆಯಿತ್ತು. ಇದೀಗ ತಮ್ಮ ಕನಸು ನನಸು ಮಾಡಿಕೊಂಡಿರುವ ಆಕೆ ಕಿರುತೆರೆಯಲ್ಲೂ ಮಿಂಚಿದ್ದಾರೆ.
'ದಿ ಟೆರರಿಸ್ಟ್' ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದ ಸಮೀಕ್ಷಾ '96' ಸಿನಿಮಾದಲ್ಲಿ ಜೂನಿಯರ್ ಜಾನು ಪಾತ್ರದಲ್ಲಿ ನಟಿಸಿದ್ದಾರೆ. ದರ್ಶಿತ್ ಭಟ್ ನಿರ್ದೇಶನದ 'ಫ್ಯಾನ್' ಚಿತ್ರದ ಜೊತೆಗೆ ನೀರೆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.