ಮುಂಬೈ: ಅನುರಾಗ್ ಕಶ್ಯಪ್ ನಿರ್ದೇಶನದ ಜನಪ್ರಿಯ ವೆಬ್ ಸೀರೀಸ್ ಸೇಕ್ರೆಡ್ ಗೇಮ್ಸ್ ಎರಡನೇ ಆವೃತ್ತಿ ಬಿಡುಗಡೆಗೆ ತಯಾರಾಗಿದೆ. ಈ ಬಾರಿ ಎರಡು ಹೊಸ ಪಾತ್ರಗಳಿದ್ದು, ಕಲ್ಕಿ ಕೋಚ್ಲಿನ್ ಹಾಗೂ ರಣ್ವೀರ್ ಶೋರೆ ಪಾತ್ರ ನಿರ್ವಹಿಸಲಿದ್ದಾರೆ.
ಸರ್ತಾಜ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸೈಫ್ ಅಲಿ ಖಾನ್ ಗೈತೊಂಡೆಯ ಮೂರನೇ ಅಪ್ಪನ ರಹಸ್ಯವನ್ನು ಬೇಧಿಸುವ ಹಾಗೂ ಮುಂಬೈಯನ್ನು ರಕ್ಷಿಸಲು ಪ್ರಯತ್ನಿಸುವ ಪಾತ್ರ ನಿರ್ವಹಿಸಲಿದ್ದಾರೆ.
ತನ್ನ ಅಧಿಕಾರವನ್ನು ಪುನಃ ಸ್ಥಾಪಿಸಲು ಪರಿತಪಿಸುವ ಗಣೇಶ್ ಗೈತೊಂಡೆ ಪಾತ್ರವನ್ನು ನವಾಜುದ್ದೀನ್ ಸಿದ್ದಿಕಿ ಪುನರಾವರ್ತಿಸಲಿದ್ದಾರೆ.
ಕಲ್ಕಿ ಹಾಗೂ ರಣ್ವೀರ್ ಈ ಸೀರೀಸ್ಗೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಕಲ್ಕಿ ಬಟ್ಯಾ ಅಬ್ಲೆಮನ್ ಪಾತ್ರ ನಿರ್ವಹಿಸಿದರೆ, ರಣ್ವೀರ್ ಶಾಹಿದ್ ಖಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡೂ ಪಾತ್ರಗಳೂ ಕಥೆಗೆ ಹೊಸ ತಿರುವು ನೀಡಲಿವೆ.
ಪಂಕಜ್ ತ್ರಿಪಾಠಿ ಮತ್ತೊಮ್ಮೆ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ಸೇಕ್ರೇಡ್ ಗೇಮ್ಸ್ನ ಎರಡನೇ ಆವೃತ್ತಿಯ ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ" ಎಂದು ವಿಕ್ರಮಾದಿತ್ಯ ಮೋಟ್ವಾನೆ ಹೇಳಿದ್ದಾರೆ.
ಈ ಸೀಸನ್ ಕುತೂಹಲಕಾರಿಯಾಗಿದ್ದು, ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿದೆ. ಮೊದಲನೇ ಸೀಸನ್ ವೀಕ್ಷಿಸಿ ಪ್ರೇಕ್ಷಕರಲ್ಲಿ ಮೂಡಿದ ಪ್ರಶ್ನೆಗಳಿಗೆ ಈ ಸೀಸನ್ನಲ್ಲಿ ಉತ್ತರ ಸಿಗಲಿದೆ ಎಂದು ಮೋಟ್ವಾನೆ ಹೇಳಿದ್ದಾರೆ.
ವಿಕ್ರಮ್ ಚಂದ್ರ ಅವರ ಕಾದಂಬರಿ ಆಧಾರಿತ ಸೇಕ್ರೆಡ್ ಗೇಮ್ಸ್ ವೆಬ್ ಸೀರೀಸ್ ತನ್ನ ವಿಭಿನ್ನ ಕಥಾವಸ್ತು ಹಾಗೂ ಅದ್ಭುತ ಪಾತ್ರನಿರ್ವಹಣೆಗೆ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು.
ಮೊದಲನೇ ಆವೃತ್ತಿಯನ್ನು ಮುಂಬೈಯ ಪೊಲೀಸ್ ಸರ್ತಾಜ್ ಸಿಂಗ್ ಹಾಗೂ ಅಪರಾಧಿ ಗಣೇಶ್ ಗೈತೊಂಡೆ ಅವರ ಜೀವನದ ಸುತ್ತಲೂ ಹೆಣೆಯಲಾಗಿತ್ತು. ಎರಡು ಪಾತ್ರಗಳ ನಡುವಿನ ಘರ್ಷಣೆಯೇ ವೆಬ್ ಸೀರೀಸ್ನ ಮುಖ್ಯ ಕಥಾವಸ್ತುವಾಗಿತ್ತು.
ಇದೀಗ ಎರಡನೇ ಆವೃತ್ತಿಯು ಆಗಸ್ಟ್ 15ರಂದು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ.