'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಪುಟ್ಟಗೌರಿಯಾಗಿ ಕಿರುತೆರೆಪ್ರಿಯರ ಮನ ಸೆಳೆದಿರುವ ರಂಜನಿ ರಾಘವನ್ 'ಕನ್ನಡತಿ'ಯಾಗಿ ಕಿರುತೆರೆಗೆ ಮರಳಿ ಬಂದಿದ್ದಾರೆ. ಈ ಧಾರಾವಾಹಿಯಲ್ಲಿ ಅಚ್ಚ ಕನ್ನಡ ಮಾತನಾಡುವ ಹುಡುಗಿಯಾಗಿ ರಂಜನಿ ಗಮನ ಸೆಳೆದಿದ್ದಾರೆ.
ದಿನ ಬೆಳಗಾದರೆ ಶೂಟಿಂಗ್, ಡಬ್ಬಿಂಗ್ ಎಂದು ಓಡಾಡುತ್ತಿದ್ದ ನಮ್ಮ ಗೌರಿ ಕೂಡಾ ಇದೀಗ ಮನೆಮಂದಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆದರೆ ರಂಜನಿ ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ. ಮೊದಲ ವಾರ ಮನೆ ಮಂದಿಯ ಜೊತೆ ಸಮಯ ಕಳೆದಿರುವ ಆಕೆ, ನಂತರ ತಮ್ಮಿಷ್ಟದ ಬರವಣಿಗೆಯತ್ತ ಗಮನ ಹರಿಸಿದ್ದಾರೆ. ಒಂದಷ್ಟು ಕಥೆಗಳಿಗೆ ಸ್ಕ್ರೀನ್ ಪ್ಲೇ ಬರೆದಿರುವ ರಂಜನಿ ಲಾಕ್ಡೌನ್ ಸಮಯದಲ್ಲಿ ಮಿಸ್ ಮಾಡದೆ ಕಾದಂಬರಿಯನ್ನು ಓದುತ್ತಾರಂತೆ. ಎಸ್.ಎಲ್. ಭೈರಪ್ಪನವರ 'ದಾಟು', 'ಗೃಹಭಂಗ', ಶಿವರಾಮ ಕಾರಂತರ 'ಅಳಿದ ಮೇಲೆ' ಮುಂತಾದ ಕಾದಂಬರಿಯನ್ನು ರಂಜನಿ ಓದಿದ್ದಾರಂತೆ.
ಮನೆಯಲ್ಲಿದ್ದರೂ ಫಿಟ್ನೆಸ್ ಬಗ್ಗೆ ಗಮನ ಹರಿಸಿರುವ ರಂಜನಿ ಡಯಟ್ಗೆ ಪ್ರಾಮುಖ್ಯತೆ ನೀಡಿದ್ದಾರೆ. ಜಂಕ್ಫುಡ್ನಿಂದ ದೂರ ಇರುವುದು ಮಾತ್ರವಲ್ಲದೆ ಜಿಮ್ ಇಲ್ಲದ ಕಾರಣ ಮನೆಯ ಹೊರಗೆ ವಾಕಿಂಗ್ ಮಾಡುತ್ತಾರೆ. ಜೊತೆಗೆ ಮನೆಯಲ್ಲೇ ಒಂದಷ್ಟು ವ್ಯಾಯಾಮ ಮಾಡುವುದನ್ನು ತಪ್ಪಿಸುವುದಿಲ್ಲ.
ಶಾಸ್ತ್ರೀಯ ಸಂಗೀತ ಕೂಡಾ ಕಲಿತಿರುವ ರಂಜನಿ ಅವರು ಲಾಕ್ಡೌನ್ ಸಮಯದಲ್ಲಿ ಕುವೆಂಪು ಬರೆದಿರುವ 'ಆನಂದಮಯ ಈ ಜಗಹೃದಯ' ಎಂಬ ಭಾವಗೀತೆಯನ್ನು ಕಲಿತಿದ್ದಾರೆ. ಒಂದಷ್ಟು ಹೊಸ ಹೊಸ ಅಡುಗೆಗಳನ್ನು ಮಾಡಿರುವ ಈಕೆ 'ಕನ್ನಡತಿ' ಧಾರಾವಾಹಿ ಮರುಪ್ರಸಾರ ಆಗುತ್ತಿರುವುದನ್ನು ತಾನೊಬ್ಬ ವೀಕ್ಷಕಿಯಾಗಿ ನೋಡುತ್ತಿದ್ದಾರಂತೆ.