ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಾಯಕನ ತಮ್ಮ ಅಖಿಲ್ ಆಗಿ ಮನೆ ಮಾತಾಗಿರುವ ರಾಜೇಶ್ ಧ್ರುವ ಇದೀಗ ಮತ್ತೊಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ಅನೀಶ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜೇಶ್ ಧ್ರುವ ಇಂದು ಕಿರುತೆರೆ ಲೋಕದಲ್ಲಿ ಅಖಿಲ್ ಎಂದೇ ಜನಪ್ರಿಯ.
ಮೂಲತಃ ಉತ್ತರ ಕನ್ನಡ ಶಿರಸಿಯ ರಾಜೇಶ್ ಧ್ರುವ ಅವರು 'ಬದುಕು' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಆರಂಭಿಸಿದರು. ನಂತರ ಆಕಾಶ ದೀಪ,ಮಿಲನ, ಒಂದೇ ಗೂಡಿನ ಹಕ್ಕಿಗಳು, ಪ್ರೀತಿ ಎಂದರೇನು, ಸರಯೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪ್ರೀತಿ ಎಂದರೇನು ಧಾರಾವಾಹಿಯಲ್ಲಿ ಖಳನಟನಾಗಿ ಅಭಿಸಿ ಸೈ ಎನಿಸಿಕೊಂಡಿರುವ ರಾಜೇಶ್ ಧ್ರುವ ಅವರು ಕಿರುತೆರೆ ಜೊತೆಗೆ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಅನಿರೀಕ್ಷಿತ, ಆಮಂತ್ರಣ, ರೌದ್ರಂ ಕಿರುಚಿತ್ರಗಳಿಗೆ ಕಥೆ, ಸಂಭಾಷಣೆ ಬರೆದಿರುವುದಲ್ಲದೆ ನಿರ್ದೇಶನವನ್ನು ಮಾಡಿದ್ದಾರೆ. ಬಹಳ ಶ್ರಮದಿಂದ ತಾವು ಇಷ್ಟಪಟ್ಟ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಜೇಶ್ ಧ್ರುವ, ಉತ್ತಮ ನೃತ್ಯಪಟು ಕೂಡಾ ಹೌದು.
ಬಾಲ್ಯದಲ್ಲಿ ಟಿವಿ ಕಾರ್ಯಕ್ರಮಗಳನ್ನು ನೋಡುತ್ತಿದ್ದಾಗ ತಾನೂ ನೃತ್ಯ ಮಾಡಬೇಕು ಎಂಬ ಆಸೆ ಅವರಿಗೆ ಇತ್ತಂತೆ. ಆ ಆಸೆಯನ್ನು ಈಡೇರಿಸುವ ಸಲುವಾಗಿ ತನ್ನೂರಿನ ಸ್ಮಾರ್ಟ್ ಡ್ಯಾನ್ಸ್ ಕ್ಲಾಸ್ಗೆ ಸೇರಿದ್ದೂ ಆಯಿತು. ನೃತ್ಯದ ವಿವಿಧ ಪ್ರಾಕಾರಗಳಾದ ಪಾಶ್ವಾತ್ಯ, ಹಿಪ್ಹಾಪ್, ಬಾಲಿವುಡ್ ಶೈಲಿಯ ನೃತ್ಯಗಳನ್ನು ರಾಘವೇಂದ್ರ ಮೂಳೆ ಅವರ ಬಳಿ ಕಲಿತ ರಾಜೇಶ್ ಧ್ರುವ ಅವರು ಹಲವೆಡೆ ಕಾರ್ಯಕ್ರಮಗಳನ್ನು ಕೂಡಾ ನೀಡಿದ್ದಾರೆ. ನಂತರ ತನ್ನೂರು ಶಿರಸಿಯಲ್ಲಿ ಧ್ರುವ ಸ್ಕೂಲ್ ಆಫ್ ಡ್ಯಾನ್ಸ್ ಪ್ರಾರಂಭಿಸಿ ನೃತ್ಯ ಪ್ರೇಮಿಗಳಿಗೆ ತರಬೇತಿ ನೀಡಲಾರಂಭಿಸಿದರು. ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕಾರಣ ತರಗತಿ ನಡೆಸುತ್ತಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ 'ತಕಧಿಮಿತಾ' ದಲ್ಲಿ ಕೂಡಾ ಕಾಣಿಸಿಕೊಂಡಿರುವ ರಾಜೇಶ್ ಧ್ರುವ ತಮ್ಮ ನೃತ್ಯದ ಮೂಲಕ ಮೋಡಿ ಮಾಡಿದ್ದರು. ಇದೀಗ 'ಅರಮನೆ ಗಿಳಿ'ಯಲ್ಲಿ ಅನೀಶ್ ಆಗಿ ಬ್ಯುಸಿಯಾಗಿದ್ದಾರೆ.