ರಾಯಚೂರು: ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹೊಸ ಛಾಪು ಮೂಡಿಸಿದ್ದು, ಜೀ ಕನ್ನಡ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಬಿಸಿಲುನಾಡಿನ ಯುವಕ ಆಯ್ಕೆಯಾಗಿದ್ದಾನೆ.
ನಗರದ ಸಿಯಾತಲಾಬ್ ಬಡಾವಣೆಯಲ್ಲಿ ತರಕಾರಿ ಮಾರುವ ಆದೆಮ್ಮ, ಆಂಜೀನಯ್ಯ ದಂಪತಿ ಮಗ ಆನಂದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ಗೆ ಆಯ್ಕೆಯಾಗಿದ್ದಾನೆ. ಕಡುಬಡತನದಲ್ಲಿ ಬೆಳೆದಿರುವ ಆನಂದ, 10 ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ. ನೃತ್ಯ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದ ಈತ, ಬಡತನದಲ್ಲಿರುವ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉಚಿತವಾಗಿ ಡ್ಯಾನ್ಸ್ ಕಲಿಸಬೇಕೆಂದು ಹುಟ್ಟಿಕೊಂಡ ಮೋನಿಲಾ ನೃತ್ಯ ಕಲಾ ಸಂಸ್ಥೆಯ ಸಂಸ್ಥಾಪಕಿ ಮೋನಿಕಾ ಅವರ ಬಳಿ ತರಬೇತಿ ಪಡೆದುಕೊಂಡಿದ್ದಾನೆ.
ಕಳೆದ 11 ವರ್ಷಗಳಿಂದ ಮೋನಿಕಾ ಅವರ ಬಳಿ ಡ್ಯಾನ್ಸ್ ತರಬೇತಿ ಪಡೆದುಕೊಂಡಿದ್ದು, ಹಲವಾರು ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾನೆ. ನಂತರ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲೂ ಕೂಡ ಭಾಗವಹಿಸಿದ್ದಾನೆ.
ಆನಂದ ಬಗ್ಗೆ ಡ್ಯಾನ್ಸ್ ತರಬೇತುದಾರರಾದ ಮೋನಿಕಾ ಅವರು ಉತ್ತಮ ಅಭಿಪ್ರಾಯ ಹೊಂದಿದ್ದು, ಬೆಳಗ್ಗೆ ತರಕಾರಿ ಮಾರಾಟ ಹಾಗೂ ಶಾಲೆ ಮುಗಿಸಿ ನೃತ್ಯ ಕಲಿಯಲು ಬರುತ್ತಿದ್ದ. ಬಡತನದ ಹಿನ್ನೆಲೆ ಆನಂದ್ಗೆ ಮನೆಯವರಿಂದ ಪ್ರೋತ್ಸಾಹ ಸಿಗಲಿಲ್ಲ. ಆದ್ರೆ ಇದೀಗ ತನ್ನ ಪ್ರತಿಭೆಯಿಂದ ದೊಡ್ಡ ಡ್ಯಾನ್ಸ್ ರಿಲಿಯಾಟಿ ಶೋ ಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.