ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಟುವಟಿಕೆಯಿಂದಿರುವ ಸೆಲಬ್ರಿಟಿಗಳು ಒಂದಲ್ಲಾ ಒಂದು ಕಾರಣದಿಂದ ಗಮನ ಸೆಳೆಯುತ್ತಾರೆ. ಕೆಲವರು ತಮ್ಮ ಪ್ರಾಜೆಕ್ಟ್ ಮೂಲಕ, ಫೋಟೋಶೂಟ್ ಮೂಲಕ ಅಥವಾ ಮತ್ತೆ ಕೆಲವರು ಉತ್ತಮ ಸಂದೇಶಗಳ ಮೂಲಕ ಎಲ್ಲರ ಕೇಂದ್ರಬಿಂದುವಾಗಿರುತ್ತಾರೆ.
'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾ ಆಗಿ ನಟಿಸುತ್ತಿದ್ದ ಕಾವ್ಯ ಗೌಡ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. "ನಾನು ಎಂದಿಗೂ ನಕಾರಾತ್ಮಕ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಯಾವಾಗಲೂ ಸಕಾರಾತ್ಮಕ ಚಿಂತನೆಯ ಬಗ್ಗೆ ಗಮನ ಹರಿಸುತ್ತೇನೆ ಎಂದು ಕಾವ್ಯ ಗೌಡ ಬರೆದುಕೊಂಡಿದ್ದಾರೆ. ಕಾವ್ಯ ನಟಿಸಿರುವುದು ಬೆರಳೆಣಿಕೆ ಧಾರಾವಾಹಿಗಳಾದರೂ ತಮ್ಮ ನಟನೆ ಮೂಲಕ ಅವರು ವೀಕ್ಷಕರನ್ನು ಸೆಳೆದಿದ್ದಾರೆ.
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದಿರುವ ಕಾವ್ಯ, 'ಮೀರಾ ಮಾಧವ' ಧಾರಾವಾಹಿಯ ಮೀರಾ ಆಗಿ ಆ್ಯಕ್ಟಿಂಗ್ ಆರಂಭಿಸಿದರು. ನಂತರ 'ಗಾಂಧಾರಿ' ಧಾರಾವಾಹಿಯಲ್ಲಿ ದೃಷ್ಟಿ, ದೀಪ್ತಿ ಎಬ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಕಾವ್ಯ, 'ರಾಧಾ ರಮಣ' ಧಾರಾವಾಹಿಯಲ್ಲೂ ಅಭಿನಯಿಸಿದ್ದರು. 'ಬಕಾಸುರ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲೂ ಕಮಾಲ್ ಮಾಡಿದರು. ಕೊರೊನಾ ವೈರಸ್ ಕಾರಣ ಪ್ರಸ್ತುತ ಕಾವ್ಯ ಯಾವುದೇ ಧಾರಾವಾಹಿಯಲ್ಲೂ ನಟಿಸುತ್ತಿಲ್ಲ. ಆದರೂ, ಈ ಕೊರೊನಾ ಸಂದರ್ಭದಲ್ಲಿ ಧೈರ್ಯದಿಂದ ಇರುವಂತೆ ಇತರರಿಗೆ ಆಶಾಭಾವನೆ ತುಂಬಲು ಯತ್ನಿಸುತ್ತಿದ್ದಾರೆ.