ಕಿರುತೆರೆ ಮೂಲಕ ನಟನಾ ಪಯಣ ಆರಂಭಿಸಿದ ಹಲವರು ಇಂದು ಹಿರಿತೆರೆಯಲ್ಲಿ ಕೂಡಾ ದೊಡ್ಡ ಹೆಸರು ಮಾಡಿದ್ದಾರೆ. ರಾಧಿಕಾ ಪಂಡಿತ್, ರಚಿತಾ ರಾಮ್, ಸುಪ್ರಿತಾ ಸತ್ಯನಾರಾಯಣ, ತೇಜಸ್ವಿನಿ ಶೇಖರ್, ಮೋಕ್ಷಿತಾ ಪೈ, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಹೀಗೆ ಸಾಲು ಸಾಲು ಕಿರುತೆರೆ ನಟಿಯರು ಹಿರಿತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ನಟಿ ಬೃಂದಾ ಆಚಾರ್ಯ ಕೂಡಾ ಇದಕ್ಕೆ ಹೊರತಾಗಿಲ್ಲ.
ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಬೃಂದಾ ಆಚಾರ್ಯ ನಟನಾ ಪಯಣಕ್ಕೆ ಮುನ್ನುಡಿ ಬರೆದದ್ದು ಕಿರುತೆರೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬೃಂದಾ ಆಚಾರ್ಯ ಇದೀಗ ಹಿರಿತೆರೆಯಲ್ಲೂ ಕಮಾಲ್ ಮಾಡಲಿದ್ದಾರೆ. ಬಾಲ್ಯದಿಂದಲೇ ಅಭಿನಯದ ಕುರಿತು ವಿಶೇಷವಾದ ಆಸಕ್ತಿ ಹೊಂದಿದ್ದ ಬೃಂದಾ ನಟಿಯಾಗಬೇಕು ಎಂದು ಕನಸು ಕಂಡಾಕೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ 'ಮಹಾಕಾಳಿ' ಪೌರಾಣಿಕ ಧಾರಾವಾಹಿಗೆ ಆಡಿಷನ್ನಲ್ಲಿ ಭಾಗವಹಿಸಿದ ಬೃಂದಾ ಆಚಾರ್ಯಗೆ ಅದೃಷ್ಟ ಒಲಿದಿತ್ತು. ಮಹಾಕಾಳಿಯ ರತಿ ಪಾತ್ರಕ್ಕೆ ಅವರು ಆಯ್ಕೆ ಆದರು.
ಇದನ್ನೂ ಓದಿ: ಪಾಪರಾಜಿ ಡೈರಿಯಲ್ಲಿದೆ ಕಾರ್ತಿಕ್, ಕಿಯಾರ ಫೋಟೋ: ವಿಡಿಯೋ
ರತಿಯಾಗಿ ಮೊದಲ ಧಾರಾವಾಹಿಯಲ್ಲಿಯೇ ಮನೋಜ್ಞವಾಗಿ ನಟಿಸಿದ್ದ ಬೃಂದಾ ನಟಿಸಿದ ಎರಡನೇ ಧಾರಾವಾಹಿ ಕೂಡಾ ಪೌರಾಣಿಕ ಕಥೆಯೇ. ಶನಿ ಧಾರಾವಾಹಿಯಲ್ಲಿ ಕೂಡಾ ನಟಿಸಿದ ಆಕೆ ಅಲ್ಲೂ ಸೈ ಎನಿಸಿಕೊಂಡರು. ಆ ಸಮಯದಲ್ಲಿ 'ಪ್ರೇಮಂ ಪೂಜ್ಯಂ' ಚಿತ್ರದ ನಾಯಕಿಯ ಪಾತ್ರಕ್ಕೆ ಆಯ್ಕೆ ನಡೆಯುತ್ತಿದೆ ಎಂದು ತಿಳಿಯಿತು. ಚಿತ್ರತಂಡಕ್ಕೆ ಬೃಂದಾ ಫೋಟೋ ಕಳುಹಿಸಿಕೊಟ್ಟರು. ಬೃಂದಾ ಫೋಟೋ ನೋಡಿದ ನಿರ್ದೇಶಕ ರಾಘವೇಂದ್ರ ಸಿನಿಮಾಗೆ ಅವರನ್ನೇ ಆಯ್ಕೆ ಮಾಡಿದರು. ಈಗಾಗಲೇ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಸಿನಿಮಾ ಮೂಲಕ ಬೃಂದಾ ಸಿನಿಪ್ರಿಯರನ್ನು ಹೇಗೆ ಸೆಳೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.