ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕನ ಅತ್ತೆ ಪುಟ್ಟತ್ತೆಯಾಗಿ ಕಾಣಿಸಿಕೊಂಡಿದ್ದ ಪ್ರಥಮಾ ಪ್ರಸಾದ್ ಬ್ರಹ್ಮಗಂಟು ಧಾರಾವಾಹಿಯಿಂದ ಹೊರಬಂದ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಆ ಗ್ಯಾಪ್ನಲ್ಲಿ ಅವರು ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದರು. ಇದೀಗ ಮತ್ತೆ ಪ್ರಥಮಾ ಕಿರುತೆರೆಗೆ ಮರಳಿದ್ದಾರೆ.
ಇದನ್ನೂ ಓದಿ: ವನ್ಯಜೀವಿಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಿ ಎಂದ ಚಾಲೆಂಜಿಂಗ್ ಸ್ಟಾರ್
ಈ ಬಾರಿ ಪ್ರಥಮಾ ಪ್ರಸಾದ್, ವಿಭಿನ್ನ ಪಾತ್ರದ ಮೂಲಕ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಪ್ರಥಮಾ ಪ್ರಸಾದ್ ಈ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ದೇವಿ ಪಾತ್ರಗಳಲ್ಲಿ ಹಾಗೂ ಇತರರಿಗೆ ಸಹಾಯ ಮಾಡುವ ಒಳ್ಳೆ ಮನಸ್ಸುಳ್ಳ ಹೆಣ್ಣಾಗಿ ನಟಿಸುತ್ತಿದ್ದ ಪ್ರಥಮಾ ಇದೇ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಸಂತಸದ ವಿಚಾರವನ್ನು ಪ್ರಥಮಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ಇದು 2021 ರಲ್ಲಿನಿಮಗೆ ತಿಳಿಸುತ್ತಿರುವ ಎರಡನೇ ಮುಖ್ಯವಾದ ವಿಚಾರ. 'ಮನಸೆಲ್ಲಾ ನೀನೇ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಆದರೆ ಈ ಧಾರಾವಾಹಿ ಮೂಲಕ ಇದೇ ಮೊದಲ ಬಾರಿಗೆ ನಾನು ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇಂತಹ ಉತ್ತಮ ಅವಕಾಶ, ಪಾತ್ರ ನೀಡಿದಕ್ಕಾಗಿ ಶ್ರುತಿ ನಾಯ್ಡು ಅವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನನ್ನ ಮೇಲಿರಲಿ" ಎಂದು ಬರೆದುಕೊಂಡಿದ್ದಾರೆ.