ಬಿಗ್ ಬಾಸ್ ಮನೆಯಲ್ಲಿ ನಿಂತಿರುವ ರೈಲು ಗಾಡಿಯಲ್ಲಿ ಮೂರು ಬೋಗಿಗಳಿವೆ. ಮೊದಲನೇ ಬೋಗಿಯಲ್ಲಿ ಮೂವರಿಗೆ ಕೂರಲು ಅವಕಾಶ ಇದೆ. ಎರಡನೇ ಬೋಗಿಯಲ್ಲಿ ಏಳು ಜನರು ಕೂರಬಹುದು. ಕೊನೆಯ ಬೋಗಿಯಲ್ಲಿ ಇಬ್ಬರು ಸ್ಪರ್ಧಿಗಳಿಗೆ ಜಾಗವಿದೆ. ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಆಡುವ ಮೂಲಕ ಬೋಗಿಯಲ್ಲಿರುವ ಸದಸ್ಯರ ಸ್ಥಾನಗಳು ಅದಲು ಬದಲು ಆಗುತ್ತವೆ. ಅಂತಿಮವಾಗಿ ಮೊದಲ ಬೋಗಿಯಲ್ಲಿ ಉಳಿಯುವ ಮೂವರು ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್‌ಗೆ ಅಭ್ಯರ್ಥಿಗಳಾಗುತ್ತಾರೆ. ಕೊನೆಯ ಬೋಗಿಯಲ್ಲಿ ಉಳಿಯುವ ಇಬ್ಬರು ನೇರವಾಗಿ ನಾಮಿನೇಟ್ ಆಗಲಿದ್ದಾರೆ. ಮೂರು ದಿನ ನಡೆದ ಟಾಸ್ಕ್‌ಗಳಿಗೆ ಗುರುವಾರ ತೆರೆ ಬಿದ್ದಿದೆ.
ಅಂತಿಮವಾಗಿ ನಿನ್ನೆ ಮೊದಲ ಬೋಗಿಯಲ್ಲಿ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್ ಮತ್ತು ಅರವಿಂದ್ ಉಳಿದುಕೊಂಡಿದ್ದು, ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು. ಇದರಿಂದ ಬೇಸರಗೊಂಡ ಪ್ರಶಾಂತ್ ಸಂಬರಗಿ ಕೊನೆಯ ಕ್ಷಣದಲ್ಲಿ ತಮ್ಮನ್ನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲ ಬೋಗಿ ಸೇರಲು ನಡೆದ ಕೊನೆಯ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ಮತ್ತು ಅರವಿಂದ್ ಭಾಗಿಯಾಗಿದ್ದರು. ಈ ಮೂವರು ಕೈ-ಕಾಲು ಕಟ್ಟಿಕೊಂಡು, ನೆಲದ ಮೇಲೆ ತೆವಳುತ್ತ ಕೇವಲ ತಲೆ ಬಳಸಿ ತಮಗೆ ನೀಡಿದ್ದ ಬಾಲ್ಅನ್ನು ಒಂದು ತುದಿಯಿಂದ ಮತ್ತೊಂದು ತುದಿಗೆ ದಾಟಿಸಬೇಕಿತ್ತು. ಈ ವೇಳೆ ಅರವಿಂದ ಅಚಾನಕ್ಕಾಗಿ ಪ್ರಿಯಾಂಕಾ ಅವರ ಬಾಲ್ಅನ್ನ ತಳ್ಳಿದರು. ಇದರಿಂದ ಅಸಮಾಧಾನಗೊಂಡ ಪ್ರಿಯಾಂಕಾ ಆಟವನ್ನು ಮುಂದುವರೆಸಲಿಲ್ಲ. ಆದರೆ, ಅರವಿಂದ್ ಮತ್ತು ಪ್ರಶಾಂತ್ ಆಟವನ್ನು ಮುಂದುವರೆಸಿದರು. ಈ ಆಟಕ್ಕೆ ಅಂತಿಮವಾಗಿ ತೀರ್ಪುಗಾರರಾಗಿದ್ದ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ವೈಷ್ಣವಿ ಗೌಡ ಅವರು ಅರವಿಂದ್‍ಗೆ ಮೊದಲ ಸ್ಥಾನ ಹಾಗೂ ಪ್ರಿಯಾಂಕಾಗೆ ಮೂರನೇ ಸ್ಥಾನ ನೀಡಿದರು. ಇದು ಪ್ರಿಯಾಂಕಾಗೆ ಬೇಸರ ತರಿಸಿತು. ನಾನು ಮೂರನೇ ಸ್ಥಾನವನ್ನು ಒಪ್ಪಿಕೊಳ್ಳಲ್ಲ ಎಂದು ತಕರಾರು ತೆಗೆದಿದ್ದರು.
ಆದರೆ ಬಿಗ್ಬಾಸ್ ರೂಲ್ಸ್ನಂತೆ ಮೂರನೇ ಸ್ಥಾನ ಪಡೆದ ಪ್ರಿಯಾಂಕಾ ಈ ವಾರ ನೇರವಾಗಿ ನಾಮಿನೇಟ್ ಆದರು. ಆದರೆ, ಪ್ರಶಾಂತ್, "ನನ್ನ ವಿರುದ್ಧ ಪಿತೂರಿ ನಡೆಸಿ ಕ್ಯಾಪ್ಟನ್ ಆಗದಂತೆ ತಡೆದಿದ್ದಾರೆ. ಹೀಗಾಗಿ, ನನಗೆ ಅನ್ಯಾಯವಾಗಿದೆ. ಕೊನೆಯ ಕ್ಯಾಪ್ಟನ್ಸಿ ಆಯ್ಕೆಯ ಟಾಸ್ಕ್‌ನಲ್ಲಿ ನನ್ನನ್ನು ವಿಜೇತನೆಂದು ನಿರ್ಧಾರ ಮಾಡಿ, ಬಳಿಕ ಅನೇಕ ಬಾರಿ ಚರ್ಚೆ ಮಾಡಿ, ಮತ್ತೆ ನಾನು ಸೋತಿರುವೆ ಅಂತ ಹೇಳಿದ್ರು. ಇದನ್ನು ನಾನು ಪ್ರತಿಭಟಿಸುವ ಸಲುವಾಗಿ 36 ಗಂಟೆಗಳ ಕಾಲ ಯಾವುದೇ ಆಹಾರ ಸೇವಿಸುವುದಿಲ್ಲ. ಉಪವಾಸ ಇರುತ್ತೇನೆ" ಎಂದು ಪ್ರಶಾಂತ್ ಹೇಳಿದ್ದಾರೆ.
ಮನದಾಸೆ ಬಿಚ್ಚಿಟ್ಟ ಮಂಜು ಪಾವಗಡ: ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ತಾವು ಇನ್ನೆರಡು ವರ್ಷದಲ್ಲಿ ಏನಾಗಬೇಕು ಎಂಬುದನ್ನು ಮನಸ್ಸು ಬಿಚ್ಚಿ ಹೇಳಿಕೊಂಡಿದ್ದಾರೆ. ಪ್ರಕಾಶ್ ರೈ, ಅನಂತ್ ನಾಗ್, ಸುದೀಪ್ ಸರ್ ರೀತಿ ಮಂಜು ಒಬ್ಬ ನಟನಾಗಬೇಕು ಎಂದು ಬಯಸಿದ್ದಾರೆ.
ಮಂಜು ಹಾಗೂ ದಿವ್ಯಾ ಇಬ್ಬರು ಕುಳಿತು ಮಾತನಾಡುತ್ತಿದ್ದ ವೇಳೆ, ದಿವ್ಯಾ ಸುರೇಶ್ ಮಂಜುಗೆ ಇನ್ನು 2 ವರ್ಷದಲ್ಲಿ ನಿನ್ನನ್ನು ನೀನು ಯಾವ ಸ್ಥಾನದಲ್ಲಿ ನೋಡಬೇಕು ಎಂದು ಅಂದುಕೊಂಡಿರುವೆ ಎಂದು ಪ್ರಶ್ನೆ ಕೇಳುತ್ತಾರೆ.
ಆಗ ಮಂಜು, "ನಾನು ಒಳ್ಳೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕೆಂದುಕೊಂಡಿದ್ದೇನೆ. ಕ್ಯಾರೆಕ್ಟರ್ ಆರ್ಟಿಸ್ಟ್ ಅಂದರೆ ತಪ್ಪಾಗುತ್ತದೆ. ನಾನು ಒಬ್ಬ ಒಳ್ಳೆ ನಟ ಆಗಬೇಕು. ನೀನು ಯಾವ ಪಾತ್ರ ಕೊಟ್ಟರು ಜೀವಿಸುವ ತರಹ ಇರಬೇಕು. ಉದಾಹರಣೆಗೆ ಪ್ರಕಾಶ್ ರೈ, ಅನಂತ್ ನಾಗ್, ಸುದೀಪ್ ಸರ್ ರೀತಿ ಇರಬೇಕು. ಒಂದು ಕ್ಯಾರೆಕ್ಟರ್ಅನ್ನು ರಫ್ ಆಗಿ ಕಂಪೋಸ್ ಮಾಡಿರುತ್ತಾರೆ. ಅವರ ತಲೆಯಲ್ಲಿ ಇವರೇ ಇರಬೇಕು ಎಂದು ಫಿಕ್ಸ್ ಆಗಿರುತ್ತಾರೆ. ಈ ಕ್ಯಾರೆಕ್ಟರ್ ಅವನು ಒಪ್ಪಿಕೊಂಡರೆ ಸಾಕು ಅವನು ನೋಡಿಕೊಳ್ಳುತ್ತಾನೆ ಎಂದು ಇರುತ್ತದೆ. ಉದಾಹರಣೆಗೆ ನಾನೇ ಒಬ್ಬ ರೈಟರ್ ಆಗಿ 20% ಬರೆದಿರುತ್ತೇನೆ. ಅವನು ಒಪ್ಪಿಕೊಂಡರೆ ಸಾಕು 100% ಪಾತ್ರವನ್ನು ಹೆಚ್ಚಿಸಿಕೊಡುತ್ತಾನೆ ಎಂಬುವ ರೀತಿ ನಟನಾಗಬೇಕು" ಎಂದು ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ.