ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಸೀರಿಯಲ್ಗಳದ್ದೇ ಪಾರುಪತ್ಯ ನಡೆಯುತ್ತಿದೆ. ಈಗ ಇನ್ನೊಂದು ತೆಲುಗು ಸೀರಿಯಲ್ ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗಲಿದೆ. ತೆಲುಗಿನ 'ಆಮೆ ಕಥಾ' ಧಾರಾವಾಹಿ ಕನ್ನಡಕ್ಕೆ ಡಬ್ ಆಗಿದ್ದು 'ರಾಣಿ ಪದ್ಮಿನಿದೇವಿ' ಹೆಸರಿನಲ್ಲಿ ಪ್ರಸಾರ ಕಾಣಲಿದೆ.
ಇದೇ ಆಗಸ್ಟ್ 24ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಮಧ್ಯಾಹ್ನ 12.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರಾಣಿ ಪದ್ಮಿನಿದೇವಿ' ಪ್ರಸಾರವಾಗಲಿದೆ. ರಾಣಿ ಪದ್ಮಿನಿದೇವಿ ಆಲಿಯಾಸ್ ಆಮೆ ಕಥಾ ಧಾರಾವಾಹಿಯಲ್ಲಿ ಕನ್ನಡ ಹುಡುಗಿ ನವ್ಯಾ ಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿರುವುದು ವಿಶೇಷ. ನಾಯಕನಾಗಿ ರವಿಕೃಷ್ಣ ನಟಿಸಿದ್ದಾರೆ. ವಿಲನ್ ಆಗಿ 'ಅರಗಿಣಿ' ಯ ಖುಷಿ ಪಾತ್ರಧಾರಿ ಮೇಘನಾ ಅಭಿನಯಿಸಿದ್ದಾರೆ.
'ರಾಣಿ ಪದ್ಮಿನಿದೇವಿ' ಧಾರಾವಾಹಿ ಮಧ್ಯಮವರ್ಗದ ಹೆಣ್ಣುಮಗಳ ಕಥೆಯಾಗಿದೆ. ಮನೆಯ ಜವಾಬ್ದಾರಿಯನ್ನು ನಿರ್ವಹಿಸುವ ದಿಟ್ಟ ಹೆಣ್ಣುಮಗಳು ತಾನು ಪ್ರೀತಿಸಿದವನನ್ನೇ ಮದುವೆಯಾಗುತ್ತಾಳೆ. ಆದರೆ ಅವನಿಂದ ವಂಚನೆಗೊಳಗಾದ ಆಕೆ ನಂಬಿಕೆ ಕಳೆದುಕೊಳ್ಳದೆ ವಂಚನೆಯ ಹಿಂದಿರುವ ಕಾರಣ ತಿಳಿಯಲು ಪ್ರಯತ್ನಿಸುತ್ತಾಳೆ. ಯಾವ ಕಾರಣಕ್ಕಾಗಿ ಪತಿ ನನಗೆ ಮೋಸ ಮಾಡಿದ ಎಂಬ ಜಾಡು ಹುಡುಕಲು ಹೊರಡುತ್ತಾಳೆ. ಅದರಲ್ಲಿ ಆಕೆ ಯಶಸ್ವಿ ಆಗುವಳೇ ಎಂಬುದು ಧಾರಾವಾಹಿಯ ಕಥೆ.