ಅನುಶ್ರೀ, ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಮಾಸ್ಟರ್ ಆನಂದ್, ಶ್ವೇತಾ ಚೆಂಗಪ್ಪ, ನಿರಂಜನ್ ದೇಶಪಾಂಡೆ ಇವರೆಲ್ಲಾ ಕಿರುತೆರೆಯಲ್ಲಿ ಹೆಸರು ಮಾಡಿರುವ ನಿರೂಪಕರು. ಇವರೆಲ್ಲಾ ನಿರೂಪಣೆ ಜೊತೆಗೆ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿ ಆ್ಯಕ್ಟಿಂಗ್ನಲ್ಲಿ ಕೂಡಾ ಸೈ ಎನಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಅನುಪಮಾ ಗೌಡ ಹಾಗೂ ಚಂದನಾ ಅನಂತಕೃಷ್ಣ ಕೂಡಾ ನಿರೂಪಣೆ ಆರಂಭಿಸಿದ್ದರು. ಕನ್ನಡ ಕೋಗಿಲೆ ಮೂಲಕ ನಿರೂಪಕಿಯಾಗಿ ಭಡ್ತಿ ಪಡೆದ ಅನುಪಮಾ ನಂತರ ಮಜಾಭಾರತದ ನಿರೂಪಣೆ ಕೂಡಾ ಮಾಡಿದ್ದರು. ಚಂದನಾ ಅನಂತಕೃಷ್ಣ, ಹಾಡು ಕರ್ನಾಟಕ ಶೋ ನಿರೂಪಣೆ ಮಾಡುವ ಮೂಲಕ ಮೊದಲ ಬಾರಿ ನಿರೂಪಕಿಯಾಗಿ ಮೋಡಿ ಮಾಡಿದ್ದರು. ಇಷ್ಟು ದಿನ ಆ್ಯಕ್ಟಿಂಗ್ ಮಾಡಿ ವೀಕ್ಷಕರ ಮನ ಸೆಳೆದಿದ್ದ ಮತ್ತೆ ಮೂವರು ನಿರೂಪಕರಾಗಿ ಹೊಸ ಜರ್ನಿ ಆರಂಭಿಸಿದ್ದಾರೆ.
ಭೂಮಿ ಶೆಟ್ಟಿ
'ಕಿನ್ನರಿ' ಧಾರಾವಾಹಿಯ ಮಣಿ ಆಗಿ ಮನೆ ಮಾತಾಗಿರುವ ಭೂಮಿ ಶೆಟ್ಟಿ, ಇದೀಗ ಮೊದಲ ಬಾರಿಗೆ ನಿರೂಪಣೆ ಆರಂಭಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಮಜಾಭಾರತದ ಸೀಸನ್ -3 ನಿರೂಪಕಿಯಾಗಿ ಆಕೆ ಕಾಣಿಸಿಕೊಳ್ಳಲಿದ್ದಾರೆ. ಕಿನ್ನರಿ ನಂತರ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಭೂಮಿ ಟಾಪ್ 5 ನೇ ಸ್ಥಾನದಲ್ಲಿದ್ದರು. 'ಇಕ್ಕಟ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಭೂಮಿ ಇದೀಗ ನಿರೂಪಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಪ್ರೀತಿ ಶ್ರೀನಿವಾಸ್
'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ಸರಸ್ವತಿ ಆಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಪ್ರೀತಿ ಶ್ರೀನಿವಾಸ್ ಕೂಡಾ ಇದೀಗ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸಂಕಲ್ಪ ಕಾರ್ಯಕ್ರಮದ ನಿರೂಪಕಿಯಾಗಿ ಪ್ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ, ಹಿರಿತೆರೆ ಜೊತೆಗೆ ಪರಭಾಷೆ ಕಿರುತೆರೆಯಲ್ಲಿ ಪ್ರೀತಿ ನಟಿಸಿದ್ದಾರೆ.
ಚಂದು ಗೌಡ
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದನ್ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಚಂದು ಗೌಡ ಇದೀಗ ನಿರೂಪಕ. ಕಲರ್ಸ್ ಕನ್ನಡದಲ್ಲಿ ಕಳೆದ ವಾರವಷ್ಟೇ ಶುರುವಾದ ಚಾಟ್ ಕಾರ್ನರ್ ಕಾರ್ಯಕ್ರಮದ ನಿರೂಪಕರಾಗಿ ಚಂದು ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕರಾಗಿ ಕೂಡಾ ಚಂದುಗೌಡ ಅಭಿನಯಿಸುತ್ತಿದ್ದಾರೆ.