ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ವಿಲನ್ ತಾಪ್ಸಿಯಾಗಿ ಅಭಿನಯಿಸಿದ್ದ ನಯನಾ ವೆಂಕಟೇಶ್ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ನಯನಾ ಗರ್ಭಿಣಿಯಾಗಿದ್ದು, ಆ ಕಾರಣದಿಂದ ನಟನಾ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದರು.
ಇದನ್ನೂ ಓದಿ: 'ಕ್ರಾಕ್' ಚಿತ್ರದ ಭೂಮ್ ಬದ್ದಲ್ ವಿಡಿಯೋ ಬಿಡುಗಡೆ ಮಾಡಿದ ಚಿತ್ರತಂಡ
ಗಂಡು ಮಗುವಿಗೆ ಜನ್ಮ ನೀಡಿದ್ದ ನಯನಾ, ಇಷ್ಟು ದಿನಗಳ ಕಾಲ ಮುದ್ದು ಮಗ ಪ್ರಯಾನ್ ಭಾರದ್ವಾಜ್ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಎರಡು ವರ್ಷಗಳ ಗ್ಯಾಪ್ ನಂತರ ಕಿರುತೆರೆಗೆ ಮರಳುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇಂತಿ ನಿಮ್ಮ ಆಶಾ' ಧಾರಾವಾಹಿಯಲ್ಲಿ ಆಶಾ ಹಿರಿಯ ಮಗ ಅಕ್ಷಯ್ ಹೆಂಡತಿ ದಿಶಾ ಆಗಿ ನಟಿಸುವ ಮೂಲಕ ನಯನಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಇಂತಿ ನಿಮ್ಮ ಆಶಾ ಧಾರಾವಾಹಿಯ ದಿಶಾಳಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ಉತ್ತಮ ಪಾತ್ರದ ಮೂಲಕ ಕಂ ಬ್ಯಾಕ್ ಆಗಿರುವುದಕ್ಕೆ ಖುಷಿಯಾಗುತ್ತಿದೆ. ಮೊದಲು ಶೂಟಿಂಗ್ ಎಷ್ಟು ಹೊತ್ತು ಇದ್ದರೂ ಏನೂ ತೊಂದರೆಯಾಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಶೂಟಿಂಗ್ ಮುಗಿದ ಕೂಡಲೇ ಮನೆಗೆ ಹೋಗಬೇಕು. ಮಗ ಇರುವ ಕಾರಣ ಶೂಟಿಂಗ್ ಮುಗಿದ ಬಳಿಕ ತುಂಬಾ ಹೊತ್ತು ನಿಲ್ಲುವ ಹಾಗಿಲ್ಲ. ನಾನು ಶೂಟಿಂಗ್ಗೆ ಹೋದಾಗ ಮನೆಯಲ್ಲಿ ಎಲ್ಲರೂ ಮಗನನ್ನು ನೋಡಿಕೊಳ್ಳುತ್ತಾರೆ ಎಂದು ನಯನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.