ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ ' ಧಾರಾವಾಹಿ ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುತ್ತಿದೆ. ಅದರಲ್ಲೂ ಅಗಸ್ತ್ಯ ರಾಥೋಡ್ ಹಾಗೂ ಇಂಚರಾ ಮಧ್ಯೆ ನಡೆಯುವ ಜಗಳವಂತೂ ನೋಡುಗರನ್ನು ರಂಜಿಸುತ್ತಿದೆ.
ಇಂಚರಾ ವೈದ್ಯ ಪಾತ್ರಧಾರಿ ಕೌಸ್ತುಭ ಮಣಿ, ನಟನೆಯ ಜೊತೆಗೆ ಫೋಟೋಶೂಟ್ ಮೂಲಕವೂ ಸೀರಿಯಲ್ ಪ್ರಿಯರ ಮನ ಸೆಳೆದಿದ್ದಾರೆ. ಬೆಂಗಳೂರಿನ ಬಸವನಗುಡಿಯ ಹುಡುಗಿ ಕೌಸ್ತುಭ, ಬಿ.ಕಾಂ ಮುಗಿಸಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು, ನಟನೆಯ ಕೋರ್ಸ್ ಕಲಿಯದ ಕಾರಣ ಅದರತ್ತ ಮುಖ ಮಾಡಿರಲಿಲ್ಲ. ಜೊತೆಗೆ ರಂಗಭೂಮಿಯ ನಂಟು ಕೂಡಾ ಆಕೆಗಿರಲಿಲ್ಲ. ಆದರೆ ಆಕೆಯ ಹಣೆಬರಹದಲ್ಲಿ ಬಣ್ಣದ ಜಗತ್ತಿನಲ್ಲೇ ಮಿಂಚಬೇಕು ಎಂದು ಬರೆದಿತ್ತೇನೋ.. ಕಲರ್ಸ್ ಕನ್ನಡ ವಾಹಿನಿಯಿಂದ ಬಂದ ಒಂದು ಕರೆಯಿಂದ ಕೌಸ್ತುಭ ಮಣಿ, ಇಂಚರಾ ವೈದ್ಯ ಆಗಿ ಬದಲಾಗಿದ್ದಾರೆ.
ವಾಹಿನಿಯಿಂದ ಕರೆ ಬಂದಾಗ ಕೌಸ್ತುಭ ನನಗೆ ನಟನೆಯ ಅನುಭವ ಇಲ್ಲ ಎಂದು ಅವರಿಗೆ ಹೇಳಿದ್ದರು. ಆದರೂ ವಾಹಿನಿಯವರು ಅವರಿಗೆ ಧೈರ್ಯ ಹೇಳಿ ಆಡಿಷನ್ನಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಮಾತಿನಂತೆ ಆಡಿಷನ್ ಭಾಗವಹಿಸಿ ಎಲ್ಲರ ಮನ ಗೆದ್ದು ಬಿಟ್ಟರು. ಇಂಚರಾ ಕ್ಯಾರೆಕ್ಟರ್ ಕುರಿತಾಗಿ ಕೆಲವು ದಿನಗಳ ವರ್ಕ್ಶಾಪ್ನಲ್ಲಿ ಭಾಗವಹಿಸಿದ ನಂತರವೇ ಶೂಟಿಂಗ್ನಲ್ಲಿ ಭಾಗವಹಿಸಿದೆ ಎಂದು ಕೌಸ್ತುಭ ಹೇಳುತ್ತಾರೆ.
ಬಣ್ಣದ ಲೋಕದಲ್ಲಿ ಮಿಂಚುವ ಬಯಕೆಯೇನೋ ಇತ್ತು. ಆಕಸ್ಮಿಕವಾಗಿ ನಾನು ಈ ಕ್ಷೇತ್ರಕ್ಕೆ ಬಂದಿದ್ದೇನೆ. ಮೊದಲ ಧಾರಾವಾಹಿಯಾದ ಕಾರಣ ಕೊಂಚ ಭಯವಿತ್ತು ನಿಜ. ಆದರೆ ಜನರು ನನ್ನ ಪಾತ್ರವನ್ನು ಪ್ರೀತಿಸುತ್ತಿದ್ದಾರೆ. ಇದರಿಂದ ತುಂಬಾ ಸಂತಸವಾಗುತ್ತಿದೆ ಎನ್ನುತ್ತಾರೆ ಕೌಸ್ತುಭ. ಇಂಚರಕ್ಕಿಂತ ಕೌಸ್ತುಭ ತುಂಬಾ ಭಿನ್ನ. ಇಂಚರ, ಯಾರು ಸಿಕ್ಕರೂ ಮಾತನಾಡುತ್ತಾಳೆ. ಆದರೆ ರಿಯಲ್ ಲೈಫ್ನಲ್ಲಿ ಕೌಸ್ತುಭ ಹಾಗಲ್ಲ, ಬದಲಿಗೆ ಆತ್ಮೀಯರ ಬಳಿ ಹೆಚ್ಚು ಮಾತನಾಡುತ್ತಾರೆ ಅಷ್ಟೆ. ಮುಖ್ಯವಾದ ಸಂಗತಿ ಎಂದರೆ ಇಂಚರಾ ರೀತಿ ಕೌಸ್ತುಭ ಯಾರ ಬಳಿಯೂ ಜಗಳ ಮಾಡುವುದಿಲ್ಲ ಎನ್ನುವ ಈ ನಟಿಗೆ ಸಹ ಕಲಾವಿದರು ಬಹಳ ಪ್ರೋತ್ಸಾಹ ನೀಡಿದ್ಧಾರಂತೆ.
ಶೂಟಿಂಗ್ ಸಮಯದಲ್ಲಿ ಆಕೆಗೆ ಧಾರಾವಾಹಿ ಸೆಟ್ನಲ್ಲಿ ನಟಿಸುತ್ತಿದ್ದೇನೆ ಎಂಬ ಭಾವನೆಯೇ ಬರುವುದಿಲ್ಲವಂತೆ. ಧಾರಾವಾಹಿಯಲ್ಲಿ ಸಂತೋಷ್ ರಾಥೋಡ್ ಆಗಿ ನಟಿಸುತ್ತಿರುವ ಸಿಹಿಕಹಿ ಚಂದ್ರು ನನ್ನನ್ನು ಮಗಳೇ ಎಂದೇ ಕರೆಯುತ್ತಾರೆ. ನನಗೆ ಬೇರೆ ಭಾಷೆಗಳಿಂದಲೂ ಆಫರ್ ಬರುತ್ತಿದೆ. ಆದರೆ ನನ್ನರಸಿ ರಾಧೆಯಲ್ಲಿ ಬ್ಯುಸಿ ಇರುವ ಕಾರಣ ಬೇರೆ ಕಡೆ ಕಮಿಟ್ ಆಗಲು ಸಾಧ್ಯವಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ನಟಿಸಲು ರೆಡಿ ಎಂದು ಕೌಸ್ತುಭ ಹೇಳುತ್ತಾರೆ.