ಸಿನಿಮಾ ಪೋಸ್ಟರ್ಗಳನ್ನ ಬ್ಯಾನ್ ಮಾಡಿದ್ದರಿಂದ ನೂರಾರು ಕಾರ್ಮಿಕರು ಕೆಲಸವಿಲ್ಲದೇ ಬೀದಿಗೆ ಬಂದಿದ್ದಾರೆ. ಕಳೆದ ಒಂದು ವರ್ಷದಿಂದ ಕೆಲಸವಿಲ್ಲ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಾಯದಿಂದ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದೀಗ ಈ ಸಮಸ್ಯೆಯನ್ನು ಬಗೆ ಹರಿಸುವಂತೆ ಕನ್ನಡ ಚಲನಚಿತ್ರರಂಗದ ಜಾಹೀರಾತು ಅಧ್ಯಕ್ಷ ರವೀಂದ್ರನಾಥ್ ಹಾಗೂ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ನೇತೃತ್ವದಲ್ಲಿ ಸರ್ಕಾರದ ಜತೆ ಚರ್ಚಿಸಿ ಪರಿಹಾರ ಕೊಡಿಸಬೇಕು ಎಂದು ನಟ ಶಿವರಾಜಕುಮಾರ್ಗೆ ಪತ್ರದ ಮುಖೇನ ಮನವಿ ಮಾಡಿಕೊಂಡರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಿವರಾಜಕುಮಾರ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆ ಈ ಬಗ್ಗೆ ಈಗಾಗಲೇ ತಾವು ಚರ್ಚಿಸಿರುವುದಾಗಿ ತಿಳಿಸಿದರು. ಇದೀಗ ಇನ್ನೊಮ್ಮೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವೆ. ಕಾರ್ಮಿಕರಿಗೆ ಈ ಬಾರಿ ಒಂದು ದಾರಿ ಮಾಡಿಕೊಡುವ ಪ್ರಯತ್ನ ಮಾಡುವೆ ಎಂದು ಶಿವಣ್ಣ ಈ ವೇಳೆ ಭರವಸೆ ನೀಡಿದರು.
ಇನ್ನು ಕನ್ನಡ ಚಲನಚಿತ್ರರಂಗದ ಜಾಹೀರಾತು ಅಧ್ಯಕ್ಷ ರವೀಂದ್ರನಾಥ್ ಮಾತನಾಡಿ, ಸಿನಿಮಾ ರಂಗ ಶುರುವಿನಿಂದಲೂ ನಾವು ಪೋಸ್ಟರ್ ಕೆಲಸವನ್ನ ಮಾಡುತ್ತಿದ್ದೇವೆ. ಇದೇ ನಮಗೆ ಜೀವನಕ್ಕೆ ದಾರಿ. ತಮಿಳು ಹಾಗೂ ಕೇರಳದಲ್ಲಿ ಇದಕ್ಕೆ ಅನುಮತಿ ಇದೆ.
ಬೇರೆ ರಾಜ್ಯದಲ್ಲಿಲ್ಲದ ಕಾನೂನು ನಮ್ಮ ರಾಜ್ಯದಲ್ಲೇಕೆ ಎಂದು ಪ್ರಶ್ನಿಸಿದ ಅವರು, ಪೋಸ್ಟರ್ಸ್ಗಳು ಸಿನಿಮಾಗಳ ಪಬ್ಲಿಸಿಟಿಗೆ ತುಂಬಾ ಸಹಕಾರಿ. ಇದೇ ಕೆಲಸವನ್ನು ನಂಬಿಕೊಂಡು ಸಾವಿರಾರು ಜನ ಇದ್ದಾರೆ. ನಮಗೂ ಸ್ವಚ್ಛತೆಯನ್ನ ಕಾಪಾಡಬೇಕು ಅಂತ ಇದೇ. ಹೀಗಾಗಿ ಅವರೇ ಜಾಗ ಕೊಡಲಿ. ಅಲ್ಲಿಯೇ ಪೋಸ್ಟರ್ಸ್ಗಳನ್ನ ಹಾಕುತ್ತೇವೆ. ಅವರ ಜೀವನಕ್ಕೂ ಒಂದು ದಾರಿ ಆಗುತ್ತೆ ಎಂದು ತಮ್ಮ ನೋವು ಹೇಳಿಕೊಂಡರು.