'ಯಾರಿಗೆ ಸಾಲುತ್ತೆ ಸಂಬಳ' ಚಿತ್ರದ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಮೋಹನ್ ಶಂಕರ್ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಬ್ರೇಕ್ಗಾಗಿ ಕಾಯುತ್ತಿರುವ ಮೋಹನ್ ಇದೀಗ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ರಾಮ್ ಜೀ ನಿರ್ದೇಶನದ ನಾಗಿಣಿ-2 ಧಾರಾವಾಹಿಯಲ್ಲಿ ದಿಗ್ವಿಜಯ್ ರಾಯ್ ಆಗಿ ಮೋಹನ್ ಶಂಕರ್ ಅಭಿನಯಿಸುತ್ತಿದ್ದಾರೆ.
ನಾಯಕ ತ್ರಿವಿಕ್ರಂ ತಂದೆ ದಿಗ್ವಿಜಯ್ ರಾಯ್ ಆಗಿ ಮೋಡಿ ಮಾಡುತ್ತಿದ್ದಾರೆ ನಟ, ನಿರ್ದೇಶಕ ಮೋಹನ್. ತನಗಿರುವ ಕೆಟ್ಟತನ ಕಿಂಚಿತ್ತೂ ಹೊರ ಜಗತ್ತಿಗೆ ತಿಳಿಯದಂತೆ ನಟಿಸುತ್ತಿರುವ ಗೋಮುಖ ವ್ಯಾಘ್ರ ದಿಗ್ವಿಜಯ್ ರಾಯ್. ದುರಾಸೆ ಹೊಂದಿರುವ ದಿಗ್ವಿಜಯ್ ಮಂತ್ರವಾದಿ ಸಹಾಯದಿಂದ ನಾಗಮಣಿಯನ್ನು ವಶಕ್ಕೆ ಪಡೆಯುತ್ತಾನೆ. ನಾಗಮಣಿಯನ್ನು ತನ್ನಲೇ ಇರಿಸಿಕೊಂಡಿರುವ ಈತ ಅದನ್ನು ಉಳಿಸಿಕೊಳ್ಳುವ ಸಲುವಾಗಿ ನಾಗಲೋಕದ ನಾಗಿಣಿಯೊಂದಿಗೆ ಸೆಣೆಸಾಡಲು ಕೂಡಾ ತಯಾರಾಗಿದ್ದಾನೆ.
'ಯಾರಿಗೆ ಸಾಲುತ್ತೆ ಸಂಬಳ' ಚಿತ್ರದ ನಂತರ ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ಮಲ್ಲ, ಕೋದಂಡರಾಮ, ಓಳು ಸಾರ್ ಬರಿ ಓಳು, ರಾಮಸ್ವಾಮಿ ಕೃಷ್ಣಸ್ವಾಮಿ, ಶುಕ್ಲಾಂಭರದರಂ, ಉಗ್ರನರಸಿಂಹ, ತಮಾಷೆಗಾಗಿ, ಸತ್ಯವಾನ್ ಸಾವಿತ್ರಿ, ಅಕ್ಕ ತಂಗಿ, ಆಕ್ಸಿಡೆಂಟ್, ಶಿಕಾರಿ, ಛತ್ರಿಗಳು ಸಾರ್ ಛತ್ರಿಗಳು ಸಿನಿಮಾಗಳಲ್ಲಿ ಅಭಿನಯಿಸಿರುವ ಮೋಹನ್ ಕೆಲವು ದಿನಗಳ ನಂತರ ನಿರ್ದೇಶಕನಾಗಿ ಭಡ್ತಿ ಪಡೆದದ್ದು 'ಕೃಷ್ಣ ನೀ ಲೇಟಾಗಿ ಬಾರೋ' ಸಿನಿಮಾದ ಮೂಲಕ.
ಇದಾದ ನಂತರ ನರಸಿಂಹ, ಮಂಜುನಾಥ ಬಿಎ, ಎಲ್ಎಲ್ ಬಿ, ಸಚಿನ್...ತೆಂಡೂಲ್ಕರ್ ಅಲ್ಲ, ಹಲೋ ಮಾಮ ಸಿನಿಮಾವನ್ನು ಮೋಹನ್ ನಿರ್ದೇಶಿಸಿದರು. ಮೋಹನ್ ಅದ್ಭುತ ಬರಹಗಾರ ಕೂಡಾ ಹೌದು. ಮಿಸ್ಟರ್ ಹರಿಶ್ಚಂದ್ರ ಸಿನಿಮಾಗೆ ಕಥೆ ಬರೆದಿರುವ ಬಹುಮುಖ ಪ್ರತಿಭೆ ಮೋಹನ್ ನಂತರ ಬಹಳ ಚೆನ್ನಾಗಿದೆ, ಶುಕ್ಲಾಭರದರಂ, ಲವಕುಶ, ಹೆಂಡ್ತೀರ್ ದರ್ಬಾರ್ ಸಿನಿಮಾಗಳಿಗೆ ಕೂಡಾ ಕಥೆ ಬರೆದಿದ್ದಾರೆ. ನಟ,ನಿರ್ದೇಶಕ, ಕಥೆಗಾರ ಆಗಿ ಹಿರಿತೆರೆಯಲ್ಲಿ ಮೋಡಿ ಮಾಡಿದ್ದ ಮೋಹನ್ ಶಂಕರ್ ಇದೀಗ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಮಾಲ್ ಮಾಡಲು ಬಂದಿದ್ದಾರೆ.