ಖಳ ನಾಯಕಿಯಾಗಿ ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡಿದ ಈಕೆ ಹೆಸರು ಮೇಘಾ ಶೆಣೈ. ಸದ್ಯಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕ ಮದನ್ ತಮ್ಮ ವಿಶಾಲ್ ಪ್ರೇಯಸಿ ಅಂಜಲಿಯಾಗಿ ಅಭಿನಯಿಸುತ್ತಿದ್ದಾರೆ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿ ಖಳನಾಯಕಿ ಕುಮುದಾ ಆಗಿ ನಟಿಸಿದ್ದ ಈಕೆ ಸಾವಿರಕ್ಕೂ ಹೆಚ್ಚು ಎಪಿಸೋಡ್ಗಳಲ್ಲಿ ಮಿಂಚಿದ್ದರು. ನಂತರ 'ಜನುಮದ ಜೋಡಿ' ಧಾರಾವಾಹಿಯಲ್ಲಿ ಅಂಜಲಿಯಾಗಿ ಅಭಿನಯಿಸಿದ್ದ ಮೇಘಾ, ಮತ್ತೆ ಬಣ್ಣ ಹಚ್ಚಿದ್ದು ಕಾವೇರಿ ಧಾರಾವಾಹಿಗೆ. ಆ ಧಾರಾವಾಹಿಯಲ್ಲಿ ಕೂಡಾ ಆಕೆಯ ಕೈ ಹಿಡಿದದ್ದು ಖಳನಾಯಕಿ ಪಾತ್ರ. ಕಾವೇರಿಯಲ್ಲಿ ಹಾಸಿನಿ ಪಾತ್ರದಲ್ಲಿ ಕಾಣಿಸಿಕೊಂಡ ಮೇಘಾ ಮುಂದೆ ಅಭಿನಯಿಸಿದ್ದು 'ಮಹಾದೇವಿ'ಯಲ್ಲಿ. ಮಹಾದೇವಿ ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿ ಆಗಿ ನಟಿಸಿದ್ದ ಮೇಘಾ, ಮೊದಲ ಬಾರಿಗೆ ಪಾಸಿಟಿವ್ ಪಾತ್ರದಲ್ಲಿ ಗುರುತಿಸಿಕೊಂಡಿದ್ದರು.
ಮಹಾದೇವಿ ಧಾರಾವಾಹಿ ನಂತರ 'ರಕ್ಷಾಬಂಧನ' ಧಾರಾವಾಹಿಯಲ್ಲಿ ರಮ್ಯ ಆಗಿ ನಟಿಸಿದ್ದ ಮೇಘಾ ಶೆಣೈ ಅಭಿನಯಕ್ಕೆ ಕಿರುತೆರೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಕ್ಷಾಬಂಧನ ಧಾರಾವಾಹಿ ಕಾರಣಾಂತರಗಳಿಂದ ನಿಂತಾಗ ಮೇಘಾಗೆ ಸ್ವಲ್ಪ ಬೇಸರವಾಗಿತ್ತಂತೆ. ಆದರೆ ಅಷ್ಟರಲ್ಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿ ಆಗಿ ರಗಡ್ ಲುಕ್ ಮೂಲಕ ಮತ್ತೆ ಮನರಂಜನೆ ನೀಡಿದ ಮೇಘಾ, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ 'ಜೀವ ಹೂವಾಗಿದೆ' ಧಾರಾವಾಹಿಯ ಅಂಜಲಿ ಆಗಿ ಮೇಘಾ ನಟಿಸುತ್ತಿದ್ದಾರೆ.