ಲಾಕ್ಡೌನ್ ಹಿನ್ನೆಲೆ ಮರು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳಲ್ಲಿ 'ವೀಕೆಂಡ್ ವಿತ್ ರಮೇಶ್' ಕೂಡಾ ಒಂದು. ಈಗಾಗಲೇ ಸುದೀಪ್, ಯಶ್, ಅಂಬರೀಶ್, ಪುನೀತ್ ರಾಜ್ಕುಮಾರ್ , ಜಗ್ಗೇಶ್ ಹಾಗೂ ಇನ್ನಿತರ ಖ್ಯಾತ ನಟರು ಭಾಗವಹಿಸಿದ್ದ ಎಪಿಸೋಡ್ಗಳು ಪ್ರಸಾರ ಕಂಡಿದೆ. ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಭಾಗವಹಿಸಿರುವ ಎಪಿಸೋಡ್ಗಳು ಪ್ರಸಾರವಾಗಲಿದೆ.
![PC: zee kannada](https://etvbharatimages.akamaized.net/etvbharat/prod-images/kn-bng-05-wwr-heggade-ganesh-photo-ka10018_27042020205025_2704f_1588000825_942.jpg)
ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು. ನವೆಂಬರ್ 25, 1948 ರಲ್ಲಿ ಜನಿಸಿದ ವೀರೇಂದ್ರ ಹೆಗ್ಗಡೆ 22 ವರ್ಷದವರಿರುವಾಗಲೇ ದೇವಸ್ಥಾನದ ಧರ್ಮಾಧಿಕಾರಿಯಾದರು. ಧರ್ಮಸ್ಥಳದಲ್ಲಿ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಕೂಡಾ ಇವರೇ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಬಹುತೇಕ ಎಲ್ಲಾ ಸದಸ್ಯರು ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕ್ಷೇತ್ರದಲ್ಲಿ ರಸ್ತೆಗಳು, ಅತಿಥಿ ಗೃಹಗಳು, ಭೋಜನಾ ಶಾಲೆಗಳು, ಮದುವೆ ಮಂಟಪಗಳು ಹಾಗೂ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಕಾರ್ಯರೂಪಕ್ಕೆ ಬಂದವು. ಇವೆಲ್ಲದರ ಜೊತೆ ಇನ್ನೂ ಎಷ್ಟೊ ವಿಷಯಗಳನ್ನು ನೀವು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡಬಹುದು.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್, 'ಕಾಮಿಡಿ ಟೈಮ್' ಎಂಬ ಕಾರ್ಯಕ್ರಮದ ಮೂಲಕ ಜನರಿಗೆ ಹತ್ತಿರವಾದರು. ಇದರೊಂದಿಗೆ ಸಿನಿಮಾ , ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ 'ಮುಂಗಾರು ಮಳೆ'ಯಂತ ಹಿಟ್ ಚಿತ್ರ ನೀಡಿ ಈಗ ಸ್ಟಾರ್ ಎನಿಸಿಕೊಂಡಿದ್ದಾರೆ. ನಟ ಆಗಬೇಕೆಂದು ಬೆಂಗಳೂರಿಗೆ ಬಂದಾಗಿನಿಂದ ಸ್ಟಾರ್ ಪಟ್ಟ ಅಲಂಕರಿಸುವವರೆಗೂ ಅವರು ಪಟ್ಟ ಕಷ್ಟ ಏನು ಎಂಬುದನ್ನು ನೀವು ಈ ಕಾರ್ಯಕ್ರಮದಲ್ಲಿ ನೋಡಬಹುದು. ಈ ಎಪಿಸೋಡ್ ಮೇ 3, ಅಂದರೆ ಇದೇ ಭಾನುವಾರ ಮಧ್ಯಾಹ್ನ 1 ಕ್ಕೆ ಪ್ರಸಾರವಾಗಲಿದೆ.