ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಬಂದಳು ಸೀತೆ ಧಾರಾವಾಹಿಯು ಮುಕ್ತಾಯಗೊಳ್ಳುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಪೂರ್ಣಿಮಾ ಎಂಟರ್ ಪ್ರೈಸಸ್ ಅಡಿಯಲ್ಲಿ ಪ್ರಸಾರವಾಗುತ್ತಿದ್ದ ಮರಳಿ ಬಂದಳು ಸೀತೆ ಧಾರಾವಾಹಿ ಇತ್ತೀಚೆಗಷ್ಟೇ 250 ಎಪಿಸೋಡ್ ಗಳನ್ನು ಪೂರೈಸಿತ್ತು. ಇದೀಗ ಟಿಆರ್ ಪಿ ಯ ಕಾರಣದಿಂದಾಗಿ ಮರಳಿ ಬಂದಳು ಸೀತೆ ಧಾರಾವಾಹಿ ಪ್ರಸಾರ ನಿಲ್ಲಿಸಲಿದೆ.
ಮಹಿಳಾ ಪ್ರಧಾನ ಧಾರಾವಾಹಿಯಾದ ಮರಳಿ ಬಂದಳು ಸೀತೆ ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ನಾಯಕ ಆರ್ಯವರ್ಧನ ಮತ್ತು ಎರಡನೇ ನಾಯಕಿ ಅಂಗಧ ಅವರ ಮದುವೆ ನಡೆಯುವಾಗ ಆರ್ಯವರ್ಧನನ ಮೊದಲನೇ ಹೆಂಡತಿ ಸೀತೆ ಎಂದು ಮದುವೆ ಮನೆಗೆ ಬರುವ ಹುಡುಗಿ ಮದುವೆ ನಿಲ್ಲಿಸಲು ತಯಾರಾಗಿ ಬರುತ್ತಾಳೆ.
ಮಾತ್ರವಲ್ಲ ಆರ್ಯವರ್ಧನ ಕುಟುಂಬದ ಕುರಿತಾಗಿ ಎಲ್ಲ ಮಾಹಿತಿಯನ್ನು ಕಲೆ ಹಾಕಿರುತ್ತಾಳೆ. ಆದರೆ, ವಿಪರ್ಯಾಸ ಎಂದರೆ ಆರ್ಯವರ್ಧನನಿಗೆ ಮೊದಲೇ ಮದುವೆ ಆಗಿದ್ದೇನೋ ನಿಜ, ಆದರೆ, ಮೊದಲನೇ ಹೆಂಡತಿ ಸೀತೆಗೂ, ಸೀತೆ ಎಂದು ಹೇಳಿಕೊಂಡು ಬಂದಿರುವ ಹೆಣ್ ಮಗಳಿಗೂ ಒಂದಿಷ್ಟು ಸಾಮ್ಯತೆ ಇರುವುದಿಲ್ಲ. ಅಂತೂ ಸೀತೆ ಮದುವೆ ಮನೆಗೆ ಬರುವಾಗ ಮದುವೆ ಮುಗಿದಿರುತ್ತದೆ.
ಮದುವೆಗೆ ಅಡ್ಡಿ ತಂದಿರುವ ನಕಲಿ ಸೀತೆಯನ್ನು ಮದುವೆ ಮನೆಯಿಂದ ಹೊರ ಹಾಕಲು ಮನೆಯವರೆಲ್ಲರೂ ನಿರ್ಧರಿಸುವಾಗ ಮೊದಲನೇ ಹೆಂಡತಿ ಮಗಳು ತನಿಷ್ಕಾ ಅಮ್ಮ ಎಂದು ಓಡಿ ಬಂದು ತಬ್ಬಿಕೊಳ್ಳುತ್ತಾಳೆ. ಸೀತೆ ಎಂದು ಬಂದವಳು ಅಸಲಿ ಸೀತೆಯಾ, ಆಕೆ ನಕಲಿ ಸೀತೆ ಎಂದಾದರೆ ಮನೆಗೆ ಬಂದಿದ್ದಾದರೂ ಯಾಕೆ, ಆಕೆಯ ಉದ್ದೇಶ ಏನು, ಮೊದಲನೇ ಹೆಂಡತಿ ಬಂದಿದ್ದು ಯಾಕೆ? ಈಗ ಆಕೆ ಎಲ್ಲಿದ್ದಳು ಎಂಬುದನ್ನೆಲ್ಲ ಈ ಧಾರಾವಾಹಿಯ ಕಥೆ ಒಳಗೊಂಡಿತ್ತು.
ಹಿರಿಯ ನಟ ಶಿವರಾಮ್ , ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ಅಗರ್ ಕರ್ ಅಭಿನಯಿಸಿದ್ದ ಮರಳಿ ಬಂದಳು ಸೀತೆ ಧಾರಾವಾಹಿ ಮುಗಿಯುತ್ತಿರುವುದು ವೀಕ್ಷಕರಿಗೆ ಬೇಸರ ತಂದಿದೆ.