ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಸ್ಫುರದ್ರೂಪಿ ಯುವಕನ ಹೆಸರು ದಿಲೀಪ್ ಶೆಟ್ಟಿ. ಎಂಕಾಂ ಮುಗಿಸಿದ ನಂತರ ದಿಲೀಪ್ ದೂರದ ದುಬೈನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಲ್ಲಿ ಹೋಗಿ ನೆಲೆಸಿದ್ದರು.

ದುಬೈ ಎಂಎನ್ಸಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಅಗಿ ಕಾರ್ಯ ನಿರ್ವಹಿಸುತ್ತಿದ್ದ ದಿಲೀಪ್ ಅವರನ್ನು ಮಾಡೆಲಿಂಗ್ ಲೋಕ ಕೈ ಬೀಸಿ ಕರೆಯಿತು. ಮಾಡೆಲಿಂಗ್ ರುಚಿ ಸಿಕ್ಕಿದ್ದೇ ತಡ, ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿಯೇ ಬಿಟ್ಟರು. ಇದೇ ರೀತಿ ಫ್ಯಾಷನ್ ಶೋಗಳಲ್ಲಿ ರ್‍ಯಾಂಪ್ ವಾಕ್ ಮಾಡುತ್ತಿದ್ದ ದಿಲೀಪ್ ಶೆಟ್ಟಿಗೆ 2015 ರಲ್ಲಿ ಮಿ. ದುಬೈ ಪಟ್ಟ ದೊರೆಯಿತು. ದುಬೈನಲ್ಲಿ ಕೆಲಸ ಮಾಡುತ್ತಿದ್ದರೂ ದಿಲೀಪ್ ಕನ್ನಡವನ್ನು ಮರೆತಿರಲಿಲ್ಲ. ಕನ್ನಡದ ಹಾಡುಗಳಿಗೆ ಡಬ್ಸ್ಮ್ಯಾಶ್ ಮಾಡಲು ಆರಂಭಿಸಿದರು.

ದಿಲೀಪ್ ಅವರ ಡಬ್ ಸ್ಮ್ಯಾಶ್ ವಿಡಿಯೋಗಳನ್ನು ನೋಡಿದ ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್, ದಿಲೀಪ್ ಶೆಟ್ಟಿಯನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದರು. ಅದೂ ಕೂಡಾ ನಾಯಕನ ಪಾತ್ರಕ್ಕೆ. ಒಳ್ಳೆಯ ಆಫರ್ ಬಂದ ಕಾರಣ ಕೆಲಸಕ್ಕೆ ಗುಡ್ ಬೈ ಹೇಳಿದ ದಿಲೀಪ್, ನಂತರ 'ವಿದ್ಯಾ ವಿನಾಯಕ' ಧಾರಾವಾಹಿಯ ವಿನಾಯಕ ಆಗಿ ಕಿರುತೆರೆ ಲೋಕದಲ್ಲಿ ಖ್ಯಾತಿ ಗಳಿಸಿದರು. ಮೊದಲ ಧಾರಾವಾಹಿಯಲ್ಲೇ ಕ್ಲಿಕ್ ಆದ ಹುಡುಗ ಮತ್ತೆ ತೆಲುಗಿಗೆ ಹಾರಿದರು.

ತೆಲುಗಿನ 'ಸ್ವರ್ಣಖಡ್ಗಂ' ಧಾರಾವಾಹಿಯಲ್ಲಿ ನಟಿಸಿದ ಈತ ನಂತರ ಡ್ಯಾನ್ಸ್ ಶೋನಲ್ಲಿ ಕೂಡಾ ಮಿಂಚಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ದಿಲೀಪ್ ಫಿನಾಲೆವರೆಗೂ ಬಂದಿದ್ದರು. ಸದ್ಯಕ್ಕೆ 'ಕಸ್ತೂರಿ ನಿವಾಸ'ದ ರಾಘವನಾಗಿ ಬ್ಯುಸಿಯಾಗಿರುವ ದಿಲೀಪ್ ಶೆಟ್ಟಿ ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ತಮ್ಮ ಪ್ರತಿಭೆ ತೋರಿಸಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.