ಕಿರುತೆರೆ ವೀಕ್ಷಕರಿಗೆ ನಗೆ ಊಟವನ್ನು ನೀಡುವ ಮಜಾ ಟಾಕೀಸ್ ಈಗಾಗಲೇ ಆರಂಭವಾಗಿದೆ. ಇದರ ಜೊತೆಗೆ ಈ ವಾರಾಂತ್ಯದಿಂದ ಮತ್ತೊಂದು ಹಾಸ್ಯ ಕಾರ್ಯಕ್ರಮ ಮಜಾಭಾರತ ಕೂಡಾ ಆರಂಭ ಆಗಲಿದೆ. ಇದರಿಂದ ಹಾಸ್ಯಪ್ರಿಯರಿಗೆ ವಾರಾಂತ್ಯದಲ್ಲಿ ದುಪ್ಪಟ್ಟು ಮನರಂಜನೆ ದೊರೆಯುವುದರಲ್ಲಿ ಅನುಮಾನವೇ ಇಲ್ಲ.
ನವಿರಾದ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದ ಮಜಾಭಾರತ ಈಗಾಗಲೇ ಯಶಸ್ವಿ ಎರಡು ಸಂಚಿಕೆಗಳನ್ನು ಪೂರೈಸಿದೆ. ಇದೀಗ ಹೊಸ ಸೀಸನ್, ನವೆಂಬರ್ 7 ರಂದು ಆರಂಭವಾಗಲಿದ್ದು ಕಿನ್ನರಿ ಧಾರಾವಾಹಿಯ ಮಣಿ ಖ್ಯಾತಿಯ ಭೂಮಿ ಶೆಟ್ಟಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಹಿರಿತೆರೆ, ಕಿರುತೆರೆ ನಟ ಹರೀಶ್ ರಾಜ್ ಅವರು ಕೂಡಾ ಮಜಾಭಾರತದ ಪರ್ಮನೆಂಟ್ ಗೆಸ್ಟ್ ಆಗಿದ್ದು, ಪ್ರತಿ ಸಂಚಿಕೆಯಲ್ಲೂ ವಿಭಿನ್ನ ಅವತಾರಗಳ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದ್ದಾರೆ.
- " class="align-text-top noRightClick twitterSection" data="
">
ಕಳೆದ 2 ಸೀಸನ್ಗಳಂತೆ ಈ ಬಾರಿಯೂ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್, ಮಜಾಭಾರತದ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಮಜಾಭಾರತದ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸ್ಪರ್ಧಿಗಳ ಅಭಿನಯದ ಜೊತೆಗೆ ಭೂಮಿ ಶೆಟ್ಟಿ ನಿರೂಪಣೆ, ಹರೀಶ್ ರಾಜ್ ಅವರ ನಾನಾ ಅವತಾರಗಳನ್ನು ನೋಡಿ ಕಣ್ತುಂಬಿಕೊಳ್ಳಲು ವೀಕ್ಷಕರು ಕಾಯುತ್ತಿರುವುದಂತೂ ನಿಜ.