ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಲಕ್ಕಿ ಪಾತ್ರಧಾರಿಯಾಗಿ ನಟಿಸುವ ಮೂಲಕ ಹೆಣ್ಣುಮಕ್ಕಳ ಹೃದಯ ಕದ್ದಿರುವ ಈ ಚಾಕೊಲೇಟ್ ಬಾಯ್ ಮಂಜಿನ ನಗರಿ ಮಡಿಕೇರಿಯವರು. ಲಕ್ಕಿ ಎಂದೇ ಹೆಸರುವಾಸಿಯಾದ ಈತನ ಹೆಸರು ಭರತ್ ಬೋಪಣ್ಣ.
ಪೌರಾಣಿಕ ಧಾರಾವಾಹಿ 'ಗಿರಿಜಾ ಕಲ್ಯಾಣ' ದಲ್ಲಿ ರಾಜಕುಮಾರನ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟನಾರಂಗಕ್ಕೆ ಪಾದಾರ್ಪಣೆ ಮಾಡಿದ ಭರತ್ ಮಾಡೆಲಿಂಗ್ನಲ್ಲೂ ಮಿಂಚಿದ್ದಾರೆ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಆಸಕ್ತಿ ಹೊಂದಿದ್ದ ಭರತ್, ತಾನು ಕೂಡಾ ಮುಂದೊಂದು ದಿನ ನಟನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲವಂತೆ. ನಾನಿನ್ನೂ ಬಣ್ಣದ ಲೋಕಕ್ಕೆ ಹೊಸಬ. ಈಗಷ್ಟೇ ಈ ಕ್ಷೇತ್ರದಲ್ಲಿ ನಾನು ಗುರುತಿಸಿಕೊಳ್ಳುತ್ತಿದ್ದೇನೆ. ಆದರೆ ಮೊದಲ ಧಾರಾವಾಹಿಯಲ್ಲೇ ಪೌರಾಣಿಕ ಪಾತ್ರದಲ್ಲಿ ನಟಿಸಿದ್ದೇನೆ ಎಂಬುದೇ ನನಗೆ ಖುಷಿ ಎನ್ನುವ ಭರತ್ ಅವರಿಗೆ ವಿಭಿನ್ನ ರೀತಿಯ ಪಾತ್ರಗಳಿಗೆ ಜೀವ ತುಂಬುವ ಮಹಾದಾಸೆ.
ಲಕ್ಕಿ ಪಾತ್ರದ ಮೂಲಕವೇ ರಾಜ್ಯದ ಮನೆಮಾತಾಗಿರುವ ಭರತ್ ಬೋಪಣ್ಣ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಸ್ಪರ್ಶ ರೇಖಾ ನಿರ್ಮಾಣದ 'ಡೆಮೋ ಪೀಸ್' ಎಂಬ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ಭರತ್ ನಟಿಸುತ್ತಿದ್ದಾರೆ. ಸಂತಸದ ವಿಚಾರವೆಂದರೆ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಭರತ್ ಅವರ ನಟನೆ ಕಂಡು ಇಷ್ಟಪಟ್ಟು 'ಡೆಮೋ ಪೀಸ್' ಸಿನಿಮಾಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಒಟ್ಟಿನಲ್ಲಿ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಮಂಜಿನ ನಗರಿ ಹುಡುಗ ಭರತ್ ಬೋಪಣ್ಣ ಮಿಂಚಲು ರೆಡಿಯಾಗಿದ್ದಾರೆ.