ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಲಗ್ನಪತ್ರಿಕೆ' ಎಂಬ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಇಂದಿನಿಂದ ರಾತ್ರಿ 10 ಗಂಟೆಗೆ ಧಾರಾವಾಹಿ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರುತ್ತಿದೆ. ಈಗಾಗಲೇ ವಾಹಿನಿ ಈ ಧಾರಾವಾಹಿಯ ಪ್ರೋಮೋ ಬಿಡುಗಡೆ ಮಾಡಿದ್ದು ಧಾರಾವಾಹಿಪ್ರಿಯರು ಹೊಸ ಧಾರಾವಾಹಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನಾಯಕ, ನಾಯಕಿಗೆ ಮದುವೆ ಮಾಡಲು ಮನೆಯವರು ಎಲ್ಲಾ ತಯಾರಿ ಮಾಡಿಕೊಂಡಿರುತ್ತಾರೆ. ಆದರೆ ಈ ಇಬ್ಬರಿಗೂ ಮದುವೆ ಇಷ್ಟವಿರುವುದಿಲ್ಲ. ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸಬೇಕು ಎಂದು ಪ್ಲ್ಯಾನ್ ಮಾಡುತ್ತಾರೆ. ಮುಂದೆ ಏನು ನಡೆಯಲಿದೆ ಎಂಬುದು ಧಾರಾವಾಹಿ ಕಥೆ. ಇನ್ನು ಪ್ರತಿ ಧಾರಾವಾಹಿಯಂತೆ ಈ ಧಾರಾವಾಹಿಯಲ್ಲೂ ವಿಲನ್ ಇದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಈ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸಲಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಚೈತ್ರಾ , ಧಾರಾವಾಹಿಯಲ್ಲಿ ನಮಿತಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ ನನ್ನ ನಿಜ ಜೀವನಕ್ಕೆ ಈ ಧಾರಾವಾಹಿ ಬಹಳ ಹತ್ತಿರವಾಗಿದೆ ಎಂದಿದ್ದಾರೆ.

ಈ ಧಾರಾವಾಹಿಯಲ್ಲಿ ಸೂರಜ್ ಹೂಗಾರ್ ನಾಯಕನಾಗಿ ನಟಿಸಿದ್ದರೆ, ಸಂಜನಾ ಬುರ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಉಳಿದಂತೆ ಸುಂದರ್, ಮರೀನಾ ತಾರಾ, ರೇಣುಕ, ರವಿಭಟ್, ಜ್ಯೋತಿ, ಸುಪ್ರಿಯ, ದರ್ಶನ್ ಸೂರ್ಯ ಮುಂತಾದವರು ತಾರಾಗಣದಲ್ಲಿದ್ದಾರೆ.