ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ತಣ್ಣಗಾಗಿದ್ದ ಉತ್ಸಾಹವನ್ನು ಬಡಿದೆಬ್ಬಿಸಿದೆ. ಇನ್ನು ನಾಳೆ (ಜು.7) ಚಿತ್ರದ ಧ್ವನಿ ಸುರುಳಿಕೆ ಅನಾವರಣಗೊಳ್ಳುತ್ತಿದ್ದು ಅಭಿಮಾನಿಗಳಿಂದ ಕುರುಕ್ಷೇತ್ರ ನಡೆದರೂ ಆಶ್ಚರ್ಯ ಪಡಬೇಕಿಲ್ಲ.
ಕೋರಮಂಗಲ ಸ್ಟೇಡಿಯಂನಲ್ಲಿ ಕುರುಕ್ಷೇತ್ರದ ಆಡಿಯೋ ಬಿಡುಗಡೆ ಮಾಡಲಾಗುತ್ತಿದ್ದು 3000 ವ್ಯಕ್ತಿಗಳು ತುಂಬುವ ಸ್ಟೇಡಿಯಂನಲ್ಲಿ ಅದರ 10 ಪಟ್ಟು ಪಾಸ್ಗಳ ವಿತರಣೆ ಮಾಡಲಾಗಿದೆಯಂತೆ. ಜೊತೆಗೆ ಖಾಸಗಿ ವಾಹಿನಿಯೊಂದು ಇಡೀ ಕಾರ್ಯಕ್ರಮದ ಹಕ್ಕನ್ನು ಪಡೆದುಕೊಂಡಿದ್ದರಿಂದ ಇನ್ನುಳಿದ ಮಾಧ್ಯಮಗಳು ಕಾರ್ಯಕ್ರಮದಿಂದ ದೂರವೇ ಇರಬೇಕಾಗಿದೆ. ಬೇರೆ ವಾಹಿನಿಗಳಿಗೆ ಇಲ್ಲಿ ಪ್ರವೇಶ ಇಲ್ಲದಿರುವುದರಿಂದ ಆ ವಾಹಿನಿಗಳಿಗೆ ಬೇಕಾದ 1 ಅಥವಾ 2 ನಿಮಿಶದ ಕ್ಲಿಪ್ ಅನ್ನು ಹಕ್ಕು ಪಡೆದ ವಾಹಿನಿಯೇ ಸರಬರಾಜು ಮಾಡಲಿದ್ದಾರಂತೆ. ಇನ್ನು ಯಾರೂ ಸ್ಥಿರ ಚಿತ್ರಗಳನ್ನು ಕ್ಲಿಕ್ಕಿಸಬಾರದು ಎಂಬ ನಿಯಮವಿದ್ದುದರಿಂದ ಯಾವ ಪತ್ರಿಕಾ ಛಾಯಾಗ್ರಾಹಕರು ಇಲ್ಲಿ ಕಾಣಿಸುವುದಿಲ್ಲ.
ಸಂಜೆ 5.30ಕ್ಕೆ ನಡೆಯುವ ಕುರುಕ್ಷೇತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲ ಪಾತ್ರವರ್ಗದ ನಟರು ಹಾಜರಿರಲಿದ್ದಾರೆ. ಇನ್ನು ಅಂಬರೀಶ್ ಚಿತ್ರದಲ್ಲಿ ಭೀಷ್ಮನ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದು ಅವರು ಕಾಲವಾಗಿದ್ದರಿಂದ ಇದು ಎಲ್ಲರನ್ನು ಕಾಡಲಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.
ಇನ್ನು ಸ್ಯಾಂಡಲ್ವುಡ್ನ ತಾರಾಬಳಗ ಇಲ್ಲಿ ಸಂಗಮ ಆಗುವುದರಿಂದಲೇ ಖಾಸಗಿ ವಾಹಿನಿ ದೊಡ್ಡ ಮೊತ್ತಕ್ಕೆ ಹಕ್ಕನ್ನು ಖರೀದಿ ಮಾಡಿದೆಯಂತೆ. ಪಾಂಡವರು ಒಂದು ಕಡೆ, ಕೌರವರು ಎದುರಾಗಿ ಮಧ್ಯೆ ಶ್ರೀ ಕೃಷ್ಣ ಪರಮಾತ್ಮ ಕೂರುವಂತ ವೇದಿಕೆ ಸಹ ಸಜ್ಜಾಗುತ್ತಿದೆ. 'ಮುನಿರತ್ನ ಕುರುಕ್ಷೇತ್ರ' ಸಿನಿಮಾದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ವಿ ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ.