ಕನ್ನಡ ಚಿತ್ರರಂಗಕ್ಕೆ ಪಿಡುಗಾಗಿರುವ ಡಬ್ಬಿಂಗ್ ಸಂಸ್ಕೃತಿ ಈಗ ಕಿರುತೆರೆಗೂ ಕಾಲಿಟ್ಟಿದ್ದು ಸರ್ಕಾರವು ಕಿರುತೆರೆಯಲ್ಲಿ ಡಬ್ಬಿಂಗ್ ಸಂಸ್ಕೃತಿಗೆ ಕಡಿವಾಣ ಹಾಕದಿದ್ದರೆ ಕಿರುತೆರೆಯನ್ನೇ ನಂಬಿಕೊಂಡು ಬದುಕುತ್ತಿರುವ ಸುಮಾರು 3000 ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಡಬ್ಬಿಂಗ್ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಕಳೆದ ಕೆಲವು ದಿನಗಳಿಂದ ಲಾಕ್ಡೌನ್ನಿಂದ ಕಿರುತೆರೆಯಲ್ಲಿ ಪ್ರಸಾರವಾಗುವ ಸುಮಾರು 20 ಧಾರಾವಾಹಿಗಳು ಪ್ರಸಾರ ನಿಲ್ಲಿಸಲಿವೆ ಎಂಬ ಮಾಹಿತಿ ಬಂದಿದೆ. ಆದರೆ ಅದು ಲಾಕ್ಡೌನ್ನಿಂದ ಅಲ್ಲ. ಅದಕ್ಕೆ ಬೇರೆಯೇ ಕಾರಣ ಇದೆ. ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ವಾಹಿನಿಗಳು ಆ 20 ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿಲ್ಲ. ಈ ಕಾರಣದಿಂದ ಆ ಧಾರಾವಾಹಿಗಳು ಅರ್ಧಕ್ಕೇ ನಿಲ್ಲಲಿವೆ.
ಕಿರುತೆರೆಯಲ್ಲಿ ಇದೇ ಸಂಸ್ಕೃತಿ ಮುಂದುವರೆದರೆ ಧಾರಾವಾಹಿಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸುಮಾರು 3000 ಕೆಲಸಗಾರರು ಬೀದಿಗೆ ಬೀಳಲಿದ್ದಾರೆ. ಅಲ್ಲದೆ ಕಿರುತೆರೆಯಲ್ಲಿ ಪ್ರತಿ ವರ್ಷ 1200 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಅದರಲ್ಲಿ 250 ಕೋಟಿಯಷ್ಟು ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗುತ್ತದೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಡಬ್ಬಿಂಗ್ಗೆ ಕಡಿವಾಣ ಹಾಕಬೇಕು ಎಂದು ಶಿವಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಡಬ್ಬಿಂಗ್ ಧಾರಾವಾಹಿಗಳಿಗೆ ಮಣೆ ಹಾಕಬೇಡಿ ಎಂದು ವಾಹಿನಿ ಮುಖ್ಯಸ್ಥರಿಗೂ ಮನವಿ ಮಾಡಿದ್ದಾರೆ.