ಕಿರುತೆರೆ ಖ್ಯಾತ ಧಾರವಾಹಿ ರಾಧಾರಮಣದಲ್ಲಿ ಎರಡು ವರ್ಷಗಳಿಂದ ರಾಧಾ ಮಿಸ್ ಆಗಿ ನಟಿಸುತ್ತಿದ್ದ ಶ್ವೇತಾ ಪ್ರಸಾದ್ ಇತ್ತೀಚೆಗೆ ಧಾರವಾಹಿಯಿಂದ ಹೊರ ಹೋಗಿದ್ದರು. ಇದೀಗ ಅವರ ಜಾಗಕ್ಕೆ ಕಾವ್ಯ ಗೌಡ ಬಂದಿದ್ದಾರೆ.
ಧಾರವಾಹಿಯ ಮುಂದಿನ ಸಂಚಿಕೆಗಳಲ್ಲಿ ಶ್ವೇತಾ ಬದಲಿಗೆ ಕಾವ್ಯ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಾವ್ಯಗೌಡ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು‘ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು. ನಂತರ ‘ಶುಭ ವಿವಾಹ’, ‘ಮೀರಾ ಮಾಧವ’ ಹಾಗೂ ‘ಗಾಂಧಾರಿ’ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ರಾಧಾ ಮಿಸ್ ಆಗಿ ಅವರು ಧಾರವಾಹಿ ತಂಡ ಸೇರಿಕೊಂಡಿದ್ದು ಆ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ರಾಧಾ ರಮಣ ಧಾರವಾಹಿಗಾಗಿ ನಟಿ ಶ್ವೇತಾ ಅವರು ಒಂದು ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆ ಒಪ್ಪಂದ ಮುಗಿದು ವರ್ಷವೇ ಆಗಿದ್ದ ಕಾರಣ ಅವರು ಧಾರವಾಹಿಯಿಂದ ಹೊರ ಹೋಗಿದ್ದಾರೆ. ಧಾರಾವಾಹಿ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ರಮಣ ಪಾತ್ರಧಾರಿಗೆ ಪತ್ನಿಯಾಗಿ ಶಾಂತ ಸ್ವಭಾವದ ಗೃಹಿಣಿಯಾಗಿ ಅವರು ನಟಿಸಿದ್ದರು.