ಸಿನಿಮಾ ಎಂಬ ಬಣ್ಣದಲ್ಲಿ ಲೋಕದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ಅದೃಷ್ಟದ ಜತೆಗೆ ಟ್ಯಾಲೆಂಟ್ ಕೂಡ ಇರಬೇಕು. ಈ ಮಾತು ಬಹುಮುಖ ಪ್ರತಿಭೆ ಸೌಜನ್ಯ ಉರುಫ್ ಸವಿ ಮಾದಪ್ಪ ಜೀವನದಲ್ಲಿ ನಿಜವಾಗಿತ್ತು. ಆದರೆ ಉದಯೋನ್ಮುಖ ನಟಿ ದುಡುಕಿನ ನಿರ್ಧಾರದಿಂದ ಬಾರದ ಲೋಕಕ್ಕೆ ಇಂದು ಪಯಣಿಸಿದ್ದಾರೆ.
ಕರಾಟೆ, ಡ್ಯಾನ್ಸ್, ಸಿನಿಮಾ ಫೋಟೋಗ್ರಫಿ..:
ಕೊಡಗು ಜಿಲ್ಲೆಯ ಕುಶಾಲನಗರದರಾಗಿದ್ದ ಸೌಜನ್ಯ ಉರುಫ್ ಸವಿ ಮಾದಪ್ಪ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳು. ಅಪ್ಪಅಮ್ಮನ ಅಚ್ಚುಮೆಚ್ಚಿನ ಮಗಳಾಗಿದ್ದ ಸೌಜನ್ಯ ಬಾಲ್ಯದಿಂದಲೇ ಕರಾಟೆ, ಡ್ಯಾನ್ಸ್, ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ತನ್ನ ಅಪ್ಪನ ಆಸೆಯಂತೆ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಕೂಡ ಪಡೆದಿದ್ದರಂತೆ.
ಗಗನಸಖಿಯಾಗಿ ಕೆಲಸ:
ಕುಶಾಲನಗರದಲ್ಲಿ ಕಾಲೇಜು ಓದುವ ಸಮಯದಲ್ಲಿ ಸೌಜನ್ಯಗೆ ಒಂದು ಬಂಪರ್ ಆಫರ್ ಬಂದಿತ್ತಂತೆ. ಅದುವೇ ವಿಮಾನದಲ್ಲಿ ಗಗನಸಖಿಯ ಕೆಲಸ. ಕಾಲೇಜು ದಿನಗಳಲ್ಲಿ ವಿಮಾನದಲ್ಲಿ ಹಾರಾಡುವ ಕೆಲಸ ಸಿಕ್ಕಿದ್ದಕ್ಕೆ ಸೌಜನ್ಯ ತಂದೆ, ತಾಯಿ ಮಗಳ ಬಗ್ಗೆ ಹೆಮ್ಮೆ ಪಟ್ಟಿದ್ರಂತೆ. ಆರು ತಿಂಗಳು ಏರೋಹಾಸ್ಟೆಸ್ ಆಗಿ ಕೆಲಸ ಮಾಡಿದ ಸೌಜನ್ಯ, ಬೇಜಾರಾಗಿ ಈ ಕೆಲಸಕ್ಕೆ ರಾಜೀನಾಮೆ ನೀಡಿ ಪೋಷಕರ ಜತೆ ಕಾಲ ಕಳೆಯುತ್ತಿದ್ದರು.
ಫನ್ ಸಿನಿಮಾದ ಮೂಲಕ ಸಿನಿರಂಗ ಪ್ರವೇಶ:
ಆ ಸಮಯದಲ್ಲಿ ಸೌಜನ್ಯಗೆ ಮತ್ತೊಂದು ದೊಡ್ಡ ಆಫರ್ ಬರುತ್ತದೆ. ಅದುವೇ ಸಿನಿಮಾ. ನೋಡಲು ಹೀರೋಯಿನ್ ರೀತಿ ಇದ್ದ ಸೌಜನ್ಯಗೆ ಸಾಕಷ್ಟು ಜನ ನೀವು ಹೀರೋಯಿನ್ ಆಗಬಹುದು ಅಂತಾ ಹೇಳ್ತಿದ್ರಂತೆ. ಆಗ ಸೌಜನ್ಯ ತಂದೆ ಕೂಡ ನೀನು ಸಿನಿಮಾ ನಾಯಕಿ ಆಗಬಹುದು ಎಂದು ಹುರಿದುಂಬಿಸಿದ್ದಾರೆ. ನೋಡಲು ಅಂದವಾಗಿದ್ದ ಸೌಜನ್ಯಗೆ ಆಫರ್ ಬಂದ ಸಿನಿಮಾ ಫನ್. ಒಂದು ವಾರಗಳ ಕಾಲ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣವಾದ ಫನ್ ಸಿನಿಮಾ ಕೆಲವು ಕಾರಣಗಳಿಂದ ಅರ್ಧಕ್ಕೆ ನಿಂತು ಹೋಗಿದೆ.
ಈ ಸಿನಿಮಾ ಬಳಿಕ ಸೌಜನ್ಯ ಎರಡನೇ ಸಿನಿಮಾ ಚೌಕಟ್ಟು. ಈ ಚಿತ್ರದಲ್ಲಿ ಇಬ್ಬರು ನಾಯಕಿಯಲ್ಲಿ ಎರಡನೇ ನಾಯಕಿಯಾಗಿ ಸೌಜನ್ಯ ಅಭಿನಯಿಸಿದ್ದಾರೆ. ಆದರೆ ಈ ಚೌಕಟ್ಟು ಸಿನಿಮಾ ಕೂಡ ತೆರೆಗೆ ಬಂದಿಲ್ಲ. ಈ ಮಧ್ಯೆ ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದಲ್ಲಿ ಸೌಜನ್ಯ ಎರಡನೇ ನಾಯಕಿಯಾಗಿ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾ ಕೂಡ ಬಿಡುಗಡೆಯಾಗಿಲ್ಲ ಎಂಬುದೇ ಬೇಸರದ ಸಂಗತಿ.
ಸೌಜನ್ಯ ನಟನೆ ಅಲ್ಲದೇ ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದರು. ಇದಕ್ಕೆಲ್ಲಾ ಬ್ಯಾಕ್ ಬೋನ್ ಆಗಿ ಸೌಜನ್ಯ ತಂದೆ, ತಾಯಿ ಹಾಗು ಸಹೋದರ ಇದ್ರಂತೆ. ಐಷಾರಾಮಿ ಜೀವನ ನಡೆಸುತ್ತಿದ್ದ ಸೌಜನ್ಯ ಯಾಕೆ ಸಾಯುವ ನಿರ್ಧಾರ ಮಾಡಿದರು ಅನ್ನೋದು ಮಾತ್ರ ಯಕ್ಷ ಪ್ರಶ್ನೆ.
ಸಾವಿಗೂ ಮುನ್ನ ಡೆತ್ನೋಟ್ ಬರೆದಿರುವ ಯುವತಿ, ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ. ನನ್ನನ್ನು ಕ್ಷಮಿಸಿ ಅಪ್ಪ,ಅಮ್ಮ ಅಂತ ಕ್ಷಮೆ ಕೇಳಿ ಬಾರದ ಲೋಕಕ್ಕೆ ಹೋಗಿದ್ದಾರೆ.
ಇದನ್ನೂ ಓದಿ: ಡೆತ್ನೋಟ್ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆ