ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರವಷ್ಟೇ ಆರಂಭವಾಗಿರುವ ಹೊಚ್ಚ ಹೊಸ ಧಾರಾವಾಹಿ 'ಜೊತೆ ಜೊತೆಯಲಿ' ಇದೀಗ ಮೊದಲ ಸ್ಥಾನದಲ್ಲಿದೆ. 45 ವರ್ಷದ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ 20 ವರ್ಷದ ಮುದ್ದಾದ ಹುಡುಗಿ ಅನು ನಡುವಿನ ಪ್ರೇಮಕಥೆಯೇ ಈ ಧಾರಾವಾಹಿಯ ಜೀವಾಳ.
ಈಗಾಗಲೇ ಧಾರಾವಾಹಿಯಲ್ಲಿ ನಾಯಕ-ನಾಯಕಿಯರಿಬ್ಬರಿಗೂ ಪರಿಚಯವಾಗಿದೆ. ಈ ಪರಿಚಯ ಮುಂದೆ ಹೇಗೆ ಸಾಗುವುದೋ ಎಂಬ ಕುತೂಹಲ ಎಲ್ಲಾ ವೀಕ್ಷಕರಿಗಿದೆ. ಈ ಮೊದಲು 'ಪಾರು' ಧಾರಾವಾಹಿ ಮೊದಲ ಸ್ಥಾನದಲ್ಲಿದ್ದು ಕಳೆದ ವಾರವಷ್ಟೇ 'ಗಟ್ಟಿಮೇಳ' ಧಾರಾವಾಹಿ 'ಪಾರು'ವಿಗೆ ಸೆಡ್ಡು ಹೊಡೆದಿತ್ತು. ಇದೀಗ 'ಜೊತೆ ಜೊತೆಯಲಿ' ನಂಬರ್ ಒನ್ ಸ್ಥಾನ ಪಡೆದಿದೆ. ಧಾರಾವಾಹಿ ಆರಂಭವಾಗಿ ಕೇವಲ ಎರಡು ವಾರಗಳಷ್ಟೇ ಕಳೆದಿವೆ. ಆದರೂ ಕಡಿಮೆ ಸಮಯದಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆರೂರು ಜಗದೀಶ್ ನಿರ್ದೇಶನದ ಈ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ್ ನಾಯಕ ಆರ್ಯವರ್ಧನ್ ಆಗಿ, ಮೇಘಾಶೆಟ್ಟಿ ನಾಯಕಿ ಅನು ನಟಿಸುತ್ತಿದ್ದಾರೆ.
- " class="align-text-top noRightClick twitterSection" data="">
'ತುಂಟಾಟ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ನಾಯಕನಾಗಿ ಪರಿಚಯವಾದ ಅನಿರುದ್ಧ್ ಜತ್ಕರ್ ನೀನೆಲ್ಲೋ ನಾನಲ್ಲೇ, ರಾಮ ಶಾಮ ಭಾಮ, ಜ್ಯೇಷ್ಠ, ಸತ್ಯವಾನ್ ಸಾವಿತ್ರಿ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ 'ಜೊತೆ ಜೊತೆಯಲಿ' ಧಾರಾವಾಹಿಯ ಆರ್ಯವರ್ಧನ್ ಪಾತ್ರಧಾರಿಯಾಗಿ ಕಿರುತೆರೆಗೆ ಕಾಲಿಟ್ಟದ್ದೇ ತಡ ಅನಿರುದ್ಧ್ ಮೊದಲಿಗಿಂತ ಹೆಚ್ಚಿನ ಜನರಿಗೆ ಪರಿಚಯವಾಗಿದ್ದಾರೆ. ಅನಿರುದ್ಧ್ಗೆ ಜೋಡಿಯಾಗಿರುವ ಮೇಘಾಶೆಟ್ಟಿ ಕೂಡಾ ಬಹಳ ಚೆನ್ನಾಗಿ ನಟಿಸಿದ್ದಾರೆ. ಧಾರಾವಾಹಿ ಆರಂಭವಾಗುವ ಮುನ್ನವೇ ಪ್ರೋಮೋ ಎಲ್ಲರ ಮನಸೆಳೆದಿತ್ತು. ಫ್ರೋಮೋಗೆ ತಕ್ಕಂತೆ ಧಾರಾವಾಹಿ ಕೂಡಾ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಕರನ್ನು ಪಡೆದುಕೊಂಡಿರುವುದಕ್ಕೆ ಧಾರಾವಾಹಿ ತಂಡ ಸಂತೋಷ ವ್ಯಕ್ತಪಡಿಸಿದೆ.