ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಪ್ರೇಕ್ಷಕರ ಮೆಚ್ಚಿನ ಧಾರಾವಾಹಿ. ಮೇಘ ಶೆಟ್ಟಿ ಅಲಿಯಾಸ್ ಅನು ಸಿರಿಮನೆ ಈ ಧಾರಾವಾಹಿ ಮೂಲಕ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ. ನಟನೆಯ ಬಗ್ಗೆ ಸ್ವಲ್ಪವೂ ತಿಳಿಯದ ಈ ಮುದ್ದು ಹುಡುಗಿ ಈಗ ಧಾರಾವಾಹಿ ಪ್ರಿಯರ ಮೆಚ್ಚಿನ ಅನು ಆಗಿದ್ದಾರೆ.

ಇಷ್ಟು ದಿನಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿದ ಮೇಘ ಶೆಟ್ಟಿ ಈಗ ಬೆಳ್ಳಿತೆರೆಗೂ ಕಾಲಿಡುತ್ತಿದ್ದಾರೆ ಎನ್ನಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸುವ ಅವಕಾಶ ಮೇಘ ಶೆಟ್ಟಿಗೆ ದೊರಕಿದೆ. ಮೇಘ ಶೆಟ್ಟಿಗೆ ತಾನೊಬ್ಬ ಐಎಎಸ್ ಆಫೀಸರ್ ಆಗಬೇಕೆಂಬುದು ಜೀವನದ ದೊಡ್ಡ ಕನಸಾಗಿತ್ತು. ಆದರೆ ಬಣ್ಣದ ಲೋಕದಲ್ಲಿ ಅಚಾನಕ್ ಆಗಿ ದೊರೆತ ಅವಕಾಶವನ್ನು ತಿರಸ್ಕರಿಸಲು ಮನಸ್ಸು ಬರದೆ ಬಂದ ಅವಕಾಶವನ್ನು ಒಪ್ಪಿಕೊಂಡರು. ಇಲ್ಲಿ ಸಕ್ಸಸ್ ಕೂಡಾ ಆದರು.

ಮಹೇಶ್ ಗೌಡ ನಿರ್ದೇಶನದ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ಮೇಘ ಶೆಟ್ಟಿ ಗಣೇಶ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರದ ಬಗ್ಗೆ ಮೇಘ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಮೂಲಗಳ ಪ್ರಕಾರ ಮೇಘ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ಕಲಾಗಿದೆ. ಇದು ನಿಜವೇ ಆಗಿದ್ದಲ್ಲಿ ಕಿರುತೆರೆಯಲ್ಲಿ ಸಕ್ಸಸ್ ಕಂಡಿರುವ ಮೇಘ ಶೆಟ್ಟಿ ಬೆಳ್ಳಿತೆರೆಯಲ್ಲಿ ಸಿನಿಪ್ರಿಯರನ್ನು ಹೇಗೆ ರಂಜಿಸಲಿದ್ದಾರೆ ಕಾದು ನೋಡಬೇಕು.
