ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ 'ಜೀವ ಹೂವಾಗಿದೆ' ಧಾರಾವಾಹಿ ಯಶಸ್ವಿ 200 ಸಂಚಿಕೆಗಳನ್ನು ಪೂರೈಸಿದೆ. ಮಾಲತೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯಲ್ಲಿ ಮಧು ಹಾಗೂ ಮದನ್ ನಡುವಿನ ಪ್ರೇಮ ಕಥೆಯೇ ಕಥಾ ಹಂದರ. ಈ ವಿಭಿನ್ನ ಪ್ರೇಮಕಥೆಯನ್ನು ಧಾರಾವಾಹಿ ಪ್ರಿಯರು ಕೂಡಾ ಸ್ವೀಕರಿದ್ದಾರೆ ಎನ್ನುವುದಕ್ಕೆ ಇದು 200 ಸಂಚಿಕೆಗಳನ್ನು ಪೂರೈಸಿರುವುದೇ ಸಾಕ್ಷಿ.
ನಾಯಕ ಮದನ್ ಹಾಗೂ ನಾಯಕಿ ಮಧುವಿನ ಪ್ರೀತಿಗೆ ಮನೆಯವರ ಒಪ್ಪಿಗೆ ಇರುವುದಿಲ್ಲ. ಅದಕ್ಕೆ ಕಾರಣ ಎರಡು ಕುಟಂಬದವರ ನಡುವೆ ಇದ್ದ ದ್ವೇಷ. ಆದರೂ ಮನೆಯವರು ತಮ್ಮ ದ್ವೇಷವನ್ನು ಮರೆತು ಮದುವೆಗೆ ಒಪ್ಪುತ್ತಾರೆ. ಮದುವೆಯ ಹಿಂದಿನ ದಿನ ಮದನ್ ಆ್ಯಕ್ಸಿಡೆಂಟ್ನಿಂದ ಸಾವನ್ನಪ್ಪುತ್ತಾನೆ. ಮದುವೆ ನಿಲ್ಲಿಸಲು ಬಯಸದ ಎರಡೂ ಮನೆಯವರು ಮಧುವಿಗೆ ನಾಯಕ ಮದನ್ ತಮ್ಮ ವಿಶಾಲ್ನೊಂದಿಗೆ ಮದುವೆ ಮಾಡುತ್ತಾರೆ. ಅಣ್ಣ ಸಾಯುವಾಗ ಏನೇ ಆದರೂ ಮಧುವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಇನ್ನು ಆಕೆಗೆ ನೀನೆ ದಿಕ್ಕು ಎಂದು ಹೇಳಿ ಸಾಯುತ್ತಾನೆ. ಅಣ್ಣ ಹೇಳಿದಂತೆ ನಡೆಯುವ ಸಲುವಾಗಿ ವಿಶಾಲ್ ಮಧುಳನ್ನು ಮದುವೆಯಾಗುತ್ತಾನೆ. ಮದನ್ನನ್ನೇ ಗಂಡ ಎಂದು ಸ್ವೀಕರಿಸಿದ್ದ ಮಧುಗೆ ಈ ಮದುವೆ ಇಷ್ಟ ಇರುವುದಿಲ್ಲ.
ಈ ನಡುವೆ ವಿಶಾಲ್ನನ್ನು ಪ್ರೀತಿಸುತ್ತಿದ್ದ ಅಂಜಲಿ ಎಂತಹ ಪರಿಸ್ಥಿತಿಯಲ್ಲೂ ವಿಶಾಲ್ನನ್ನು ಮತ್ತೆ ಪಡೆದೇ ತೀರುತ್ತೇನೆ ಎಂಬ ಹಠ ತೊಡುತ್ತಾಳೆ. ವಿಶಾಲ್ ಮಾತ್ರ ಮಧುವನ್ನೇ ತನ್ನ ಹೆಂಡತಿ ಎಂದು ಅಂದುಕೊಂಡಿರುತ್ತಾನೆ. ಆದರೆ ನನಗೆ ದೊರೆಯದ ಪ್ರೀತಿ ನಿನಗಾದರೂ ಸಿಗಲಿ, ಅಂಜಲಿ ಜೊತೆ ಜೀವನ ಮಾಡು ಎಂದು ಮಧು ವಿಶಾಲ್ ಬಳಿ ಕೇಳಿಕೊಳ್ಳುತ್ತಾಳೆ. ಮಧುವನ್ನು ಬಿಟ್ಟು ವಿಶಾಲ್ ಅಂಜಲಿಯೊಂದಿಗೆ ಹೋಗುವನಾ...?ಮಧುವಿನ ಮುಂದಿನ ಜೀವನ ಏನು ಎಂಬುದೇ ಈ ಧಾರಾವಾಹಿಯ ಕಥೆ.
ಈ ಧಾರಾವಾಹಿಯಲ್ಲಿ ಶಿಲ್ಪಾ ರವಿ ನಾಯಕಿ ಮಧು ಆಗಿ ಹಾಗೂ ಅಜಯ್ ಸತ್ಯನಾರಾಯಣ ನಾಯಕ ವಿಶಾಲ್ ಆಗಿ ನಟಿಸುತ್ತಿದ್ದಾರೆ. ಆರ್ಯನ್ ಸೂರ್ಯ ಮದನ್ ಆಗಿ ನಟಿಸಿದ್ದು, ವಿಲನ್ ಅಂಜಲಿ ಆಗಿ ಮೇಘಾ ಶೆಣೈ ಅಭಿನಯಿಸುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರು 'ಮರಳಿ ಬಂದಳು ಸೀತೆ' ಧಾರಾವಾಹಿ ನಂತರ 'ಜೀವ ಹೂವಾಗಿದೆ' ಧಾರಾವಾಹಿಯನ್ನು ನಿರ್ಮಾಣ ಮಾಡುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.