ಲಖನೌ: ನವೆಂಬರ್ 3 ರಂದು ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಸಮಾಜವಾದಿ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರಾಜ್ಯಸಭಾ ಸಂಸದೆ, ನಟಿ ಜಯಾ ಬಚ್ಚನ್ರ ಹೆಸರು ಕಾಣೆಯಾಗಿದೆ.
ಬಾಲಿವುಡ್‌ನಲ್ಲಿ ಮಾದಕ ವ್ಯಸನದ ಆರೋಪದ ಬಗ್ಗೆ ರಾಜ್ಯಸಭೆಯಲ್ಲಿ ಜಯ ಬಚ್ಚನ್ ಅವರು ನೀಡಿರುವ ಪ್ರತಿಕ್ರಿಯೆ ಸಂಬಂಧ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಜಯಾ ಹೆಸರು ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಜಯಾ ಬಚ್ಚನ್ರ ಅನಾರೋಗ್ಯದ ಹಿನ್ನೆಲೆ ಪ್ರಚಾರ ಮಾಡಲು ಸಾಧ್ಯವಾಗದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.
ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಹಾಗೂ ಇನ್ನೂ ಜೈಲುವಾಸ ಅನುಭವಿಸುತ್ತಿರುವ ಸಂಸದ ಮೊಹಮ್ಮದ್ ಅಜಮ್ ಖಾನ್, ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಉಪಾಧ್ಯಕ್ಷ ಕಿರಣ್ಮೊಯ್ ನಂದಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೊ.ರಾಮ್ ಗೋಪಾಲ್ ಯಾದವ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ, ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಇದ್ದಾರೆ.
ಇತ್ತೀಚೆಗೆ ನಡೆದ ಸಂಸತ್ ಮುಂಗಾರು ಅಧಿವೇಶನದಲ್ಲಿ ಬಾಲಿವುಡ್‌ನಲ್ಲಿ ಮಾದಕ ವ್ಯಸನ ಆರೋಪ ಸಂಬಂಧ ನಟ, ಬಿಜೆಪಿ ಸಂಸದ ರವಿ ಕಿಶನ್ ಹಾಗೂ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ನಡುವೆ ಮಾತಿನ ಸಮರ ನಡೆದಿತ್ತು.